ಬೆಂಗಳೂರು: ರಸ್ತೆ ಅಪಘಾತ; ಟೆಕ್ಕಿ ಮೃತ್ಯು

ಬೆಂಗಳೂರು, ಫೆ. 26: ರಸ್ತೆ ವಿಭಜಕದ ಪಕ್ಕದಲ್ಲೆ ನಿಲ್ಲಿಸಿದ ಟೆಂಪೊಗೆ ಹಿಂದಿನಿಂದ ವೇಗವಾಗಿ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಟೆಕ್ಕಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊಸಪಾಳ್ಯದ ಸಾಗರ್‌ಶೆಟ್ಟಿ(25) ಎಂಬುವರು ಮೃತಪಟ್ಟ ಟೆಕ್ಕಿ ಎಂದು ಪೊಲೀಸರು ಗುರುತಿಸಿದ್ದಾರೆ.
ಕಾರ್ಕಳ ಮೂಲದ ಸಾಗರ್, ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಹೊಸಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಮಡಿವಾಳದಲ್ಲಿನ ಸ್ನೇಹಿತನ ಮನೆಗೆ ತಡರಾತ್ರಿ ಬೈಕ್‌ನಲ್ಲಿ ವೇಗವಾಗಿ ಹೋಗುತ್ತಿದ್ದರು. ಮಾರ್ಗಮಧ್ಯೆ ಗಾರೆಬಾವಿಪಾಳ್ಯದ ಆರ್‌ಎನ್‌ಎಸ್ ರಸ್ತೆಯಲ್ಲಿ ಏರ್‌ಟೆಲ್ ನೆಟ್‌ವರ್ಕ್‌ನ ಕಾಮಗಾರಿಗಾಗಿ ರಸ್ತೆ ವಿಭಜಕದ ಬಳಿಯೇ ಟೆಂಪೊವನ್ನು ನಿಲ್ಲಿಸಲಾಗಿತ್ತು. ಈ ವೇಳೆ ಅತಿ ವೇಗವಾಗಿ ಬಂದ ಬೈಕ್ ಸವಾರ ಟೆಂಪೋಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಮಡಿವಾಳ ಸಂಚಾರ ಪೊಲೀಸರು ಟೆಂಪೊ ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.





