ಚಾಮರಾಜನಗರ: ಯಡಕುರಿಯ, ಶಿವನಸಮುದ್ರ ಬಳಿಯ ಸೇತುವೆ ಲೋಕಾರ್ಪಣೆ

ಚಾಮರಾಜನಗರ,ಫೆ.26: ರಾಜ್ಯ ಸರ್ಕಾರ ಗುಣಾತ್ಮಕವಾಗಿ ಮೂಲಸೌಕರ್ಯಗಳನ್ನು ಒದಗಿಸಿದ ಪರಿಣಾಮ ಗಮನಾರ್ಹ ಬದಲಾವಣೆಯನ್ನು ಕಾಣಲು ಸಾಧ್ಯವಾಗಿದೆಯೆಂದು ಲೋಕೋಪಯೋಗಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಕೊಳ್ಳೇಗಾಲ ತಾಲೂಕಿನ ಯಡಕುರಿಯ ಸೇತುವೆ ಹಾಗೂ ಶಿವನಸಮುದ್ರ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿಮಾಣ ಮಾಡಿರುವ ಸೇತುವೆ ಉದ್ಘಾಟಿಸಿದ ಬಳಿಕ ಯಡಕುರಿಯದಲ್ಲಿ ನಡೆದ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 35 ಸಾವಿರ ಕಿ.ಮೀ ರಸ್ತೆ ಹಾಗು ಹಲವಾರು ಸೇತುವೆಗಳನ್ನು ನಿರ್ಮಾಣ ಮಾಡಿದ್ದೇವೆ. ಈ ಎಲ್ಲಾ ಕಾಮಗಾರಿಗಳು ಗುಣಮಟ್ಟದಿಂದ ಕೂಡಿದೆ. ಗುಣಮಟ್ಟದ ಕಾಮಗಾರಿಗಾಗಿ ರಾಷ್ಟ್ರಪ್ರಶಸ್ತಿ ಗೌರವ ಕೂಡಾ ಲಭಿಸಿದೆ. ಗುಣಾತ್ಮಕ ಮೂಲಸೌಕರ್ಯಗಳನ್ನು ಕಲ್ಪಿಸಿದ್ದರಿಂದ ಹಲವಾರು ಅನುಕೂಲಗಳಾಗಿವೆ ಎಂದು ಸಚಿವರು ತಿಳಿಸಿದರು.
ರಾಜ್ಯ ಸರ್ಕಾರ ಯಡಕುರಿಯದ ಬಹುಕಾಲದ ಬೇಡಿಕೆಯಾದ ಸೇತುವೆ ನಿರ್ಮಾಣವನ್ನು ಅನುಷ್ಠಾನ ಮಾಡಿ ಜನರಿಗೆ ಅನುಕೂಲ ಕಲ್ಪಿಸಿದೆ. ನಮ್ಮದೇ ಆಡಳಿತ ಅವಧಿಯಲ್ಲಿ ಅಡಿಗಲ್ಲು ಹಾಕಿ ಸೇತುವೆ ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ. ಹೀಗೆ ರಾಜ್ಯದಲ್ಲಿ ನಾನಾ ರೀತಿಯ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಿ ಪೂರ್ಣಗೊಳಿಸಿದ್ದೇವೆ ಎಂದರು.
ಜಿಲ್ಲೆಯಲ್ಲಿ ಕೊಳ್ಳೇಗಾಲ, ಹನೂರು ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹನೂರಿನಿಂದ ಮಹದೇಶ್ವರ ಬೆಟ್ಟ ಸಂಪರ್ಕಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಯಾಗಲಿದೆ. ಗುಂಡ್ಲುಪೇಟೆ, ಚಾಮರಾಜನಗರ ರಸ್ತೆ ಕಾಮಗಾರಿ ಅಭಿವೃದ್ಧಿ ಸಂಬಂದ ಡಿ.ಪಿ.ಆರ್ ಸಲ್ಲಿಸಲಾಗಿದೆ. ಕೊಳ್ಳೇಗಾಲದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನು ಮಾರ್ಚ್ 15ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಆರ್.ನರೇಂದ್ರ, ಬಹಳ ದಿನಗಳಿಂದ ಜನರ ಬೇಡಿಕೆಯಾಗಿದ್ದ ಸೇತುವೆ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಿರುವುದು ತನಗೆ ಆತ್ಮ ತೃಪ್ತಿ ತಂದಿದೆ. ನಾವು ಆರಂಭದಲ್ಲೇ ನೀಡಿದ ಭರವಸೆಯಂತೆ ನಿಗದಿತ ಅವಧಿಯೊಳಗೆ ಸೇತುವೆ ನಿರ್ಮಾಣ ಮಾಡಿದ್ದೇವೆ ಎಂದರು.
ಮುಖ್ಯಮಂತ್ರಿಯವರು ಹನೂರಿಗೆ ಭೇಟಿ ನೀಡಿ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅನುದಾನ ನೀಡಿದ್ದಾರೆ. ಹನೂರು ಭಾಗದಲ್ಲಿ ಪ್ರಮುಖವಾಗಿ ಬಹುಗ್ರಾಮ ಕುಡಿಯುವ ನೀರು ಯೋಜನೆ, ಕೆರೆಗೆ ನೀರು ತುಂಬಿಸುವ ಯೋಜನೆಗೆ ಅನುಮತಿ ನೀಡಿ ಅಗತ್ಯ ಪ್ರಕ್ರಿಯೆಗೆ ಮುಂದಾಗಿರುವುದು ಅನುಕೂಲವಾಗಿದೆ. ರಸ್ತೆ ಕಾಮಗಾರಿಗಳು ಕೂಡಾ ನಡೆಯುತ್ತಿವೆ ಎಂದು ನರೇಂದ್ರ ಅವರು ತಿಳಿಸಿದರು.
ಶಾಸಕರಾದ ಎಸ್.ಜಯಣ್ಣ ಮಾತನಾಡಿ, ತಾನು ಈ ಹಿಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ಯಡಕುರಿಯ ಸೇರಿತ್ತು. ಇಂದು ಜನರ ಬೇಡಿಕೆ ಈಡೇರಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಭಾಗಿಯಾಗುತ್ತಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯೋಗೇಶ್, ಸದಸ್ಯರಾದ ಜಯಂತಿ, ಶಿವಮ್ಮ ತಾಲೂಕು ಪಂಚಾಯತ್ ಅಧ್ಯಕ್ಷರಾದ ಆರ್.ರಾಜು, ಉಪಾಧ್ಯಕ್ಷರಾದ ಲತಾರಾಜಣ್ಣ, ಸದಸ್ಯರಾದ ಎಂ ಅರುಣ್ ಕುಮಾರ್, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಮಂಜುಳನಂಜುಂಡ ಮೂರ್ತಿ ಮುಖ್ಯ ಇಂಜಿನಿಯರ್ ಆರ್ ಶ್ರೀನಿವಾಸ್, ಆರ್ ಗಣೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







