ಬ್ಯಾಂಕಿಗೆ 109 ಕೋ.ರೂ. ವಂಚನೆ ಪ್ರಕರಣ: ಪಂಜಾಬ್ ಸಿಎಂ ಅಳಿಯನ ವಿರುದ್ಧ ಪ್ರಕರಣ ದಾಖಲು

ಹಾಪುರ್, ಫೆ. 26: ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ಗೆ 109 ಕೋ. ರೂ. ನಷ್ಟ ಉಂಟಾಗಲು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಳಿಯ ಹಾಗೂ ಇತರ 12 ಮಂದಿ ಕಾರಣ ಎಂದು ಸಿಬಿಐ ಹೇಳಿದೆ. ಉತ್ತರಪ್ರದೇಶದ ಸಿಂಭೋಲಿಯಲ್ಲಿರುವ ಖಾಸಗಿ ಸಕ್ಕರೆ ಉತ್ಪಾದನಾ ಕಾರ್ಖಾನೆ ಸಿಂಭೋಲಿ ಸುಗರ್ ಲಿಮಿಟೆಡ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಹಾಗೂ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ಅವರ ಅಳಿಯ ಗುರುಪಾಲ್ ಸಿಂಗ್, ಸಿಎಂಡಿ, ಸಿಎಫ್‌ಒ, ಸಿಇಒ, ನಿರ್ದೇಶಕರು ಹಾಗೂ ಬ್ಯಾಂಕ್‌ನ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಒಟ್ಟು 8 ಕಂಪೆನಿಗಳ ನಿರ್ದೇಶಕರ ಮಂಡಳಿಯ ಗುರುಪಾಲ್ ಸಿಂಗ್ ಕೂಡ ಒಬ್ಬರು. ಗುರುಪಾಲ್ ಸಿಂಗ್ ಕ್ಯಾ. ಅಮರೀಂದರ್ ಸಿಂಗ್ ಅವರ ಪುತ್ರಿ ಜೈ ಇಂದರ್ ಕೌರ್ ಅವರನ್ನು ವಿವಾಹವಾಗಿದ್ದಾರೆ. ಸಿಬಿಐ ಆರೋಪಿಗಳ ವಿರುದ್ಧ ಕ್ರಿಮಿನಲ್ ಸಂಚು, ವಂಚನೆ ನಿರ್ವಹಿಸುವ ಕಲಂಗಳು ಹಾಗೂ ಲಂಚ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ನಿರ್ದೇಶಕರ ನಿವಾಸ ಸೇರಿದಂತೆ ಫ್ಯಾಕ್ಟರಿ, ಕಾರ್ಪೊರೇಟ್ ಕಚೇರಿ ಹಾಗೂ ದಿಲ್ಲಿ, ನೋಯ್ಡಾ, ಹಾಪುರ್‌ನಲ್ಲಿರುವ ಕಂಪೆನಿಯ ನೋಂದಣಿ ಕಚೇರಿ ಮೇಲೆ ಸಿಬಿಐ ರವಿವಾರ ದಾಳಿ ನಡೆಸಿದೆ ಎಂದು ಸಿಬಿಐ ವಕ್ತಾರ ಅಭಿಶೇಕ್ ದಯಾಲ್ ಹೇಳಿದ್ದಾರೆ.





