ಸೇನಾ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಲಂಚ ನೀಡಲು ಯತ್ನಿಸಿದ ವ್ಯಕ್ತಿಯ ಬಂಧನ

ಹೊಸದಿಲ್ಲಿ, ಫೆ. 26: ಮುಝಾಫರ್‌ಪುರದಲ್ಲಿ ಫೆಬ್ರವರಿ 25ರಂದು ನಡೆದ ಸೇನೆಯ ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ನೇಮಕಾತಿ ಹೊಣೆ ಹೊತ್ತ ಸೇನಾ ಅಧಿಕಾರಿಗಳಿಗೆ ಲಂಚ ನೀಡಲು ಪ್ರಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಫೆಬ್ರವರಿ 22 ಹಾಗೂ 23ರಂದು ರಾತ್ರಿ ವ್ಯಕ್ತಿ ಲಂಚ ನೀಡಲು ಪ್ರಯತ್ನಿಸುತ್ತಿರುವುದನ್ನು ಸೇನೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸೇನಾ ಅಧಿಕಾರಿಗಳನ್ನು ಸಂಪರ್ಕಿಸಿ ಲಂಚ ನೀಡಲು ಯತ್ನಿಸುತ್ತಿದ್ದ ಸಂದರ್ಭ ಸೇನಾ ಅಧಿಕಾರಿಗಳು ಮಧ್ಯಪ್ರವೇಶಿಸಿ ಆತನನ್ನು ವಶಕ್ಕೆ ತೆಗೆದುಕೊಂಡರು. ಈ ಲಂಚ ಪ್ರಕರಣದಲ್ಲಿ ದೊಡ್ಡ ಜಾಲವೇ ಇರುವ ಸಾಧ್ಯತೆ ಇದೆ. ದಾನಾಪುರ್ ಹಾಗೂ ಪಾಟ್ನಾ ಮೂಲದ ಹಲವು ಜನರು ಇದರಲ್ಲಿ ಭಾಗಿಯಾಗಿದ್ದಾರೆ. ಪರೀಕ್ಷೆಗೆ ಮುನ್ನ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವುದು ಈ ಜಾಲದ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದ ಕುರಿತು ದಾನಾಪುರ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೇನಾ ಅಧಿಕಾರಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ.





