ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಾದಾಯಿ ಬಿಕ್ಕಟ್ಟಿಗೆ ಪರಿಹಾರ: ಅಮಿತ್ ಶಾ

ಕಲಬುರ್ಗಿ, ಫೆ. 26: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹಾದಾಯಿ ವಿವಾದ ಬಗೆಹರಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರೆ ಮಹಾದಾಯಿ ವಿವಾದಕ್ಕೆ ಪರಿಹಾರ ಸಿಗುತ್ತಿತ್ತು. ಈಗಲೂ ಅವರ ನಡವಳಿಕೆ ಸರಿಯಾಗಿಲ್ಲ. ಹೀಗಾಗಿ ಅದು ಸಾಧ್ಯವಾಗಲಿಲ್ಲ. ರಾಜ್ಯದ ಜನತೆ ಬಿಜೆಪಿ ಮೇಲೆ ವಿಶ್ವಾಸವಿಟ್ಟು ಅಧಿಕಾರಕ್ಕೆ ತರಲಿ ಎಂದರು.
ನಿಮಗೇಕೆ ಚಿಂತೆ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಹೇಳಿಕೆಗೆ ನಮ್ಮ ಸಹಮತ ಇಲ್ಲ. ಅವರ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂಬ ಚಿಂತೆ ನಿಮಗೇಕೆ ಎಂದು ಪ್ರಶ್ನಿಸಿದ ಅಮೀತ್ ಶಾ, ಹಾನಿ-ಲಾಭದ ಲೆಕ್ಕಾಚಾರವನ್ನು ಪಕ್ಷ ನೋಡಿಕೊಳ್ಳುತ್ತದೆ. ನೀವು ಚಿಂತೆ ಮಾಡಬೇಡಿ ಎಂದು ತಿರುಗೇಟು ನೀಡಿದರು.
‘ತ್ರಿವಳಿ ತಲಾಖ್ ಕಾಯ್ದೆ’ ಜಾರಿಗೆ ಮುಸ್ಲಿಂ ಸಮುದಾಯದ ಬಹುಪಾಲು ಮಹಿಳೆಯರ ಸಮ್ಮತಿ ಇದ್ದು, ಅದನ್ನು ಜಾರಿಗೊಳಿಸುತ್ತೇವೆ. ಮಹಿಳೆಯರಿಗೆ ಸಮಾನ ಅಧಿಕಾರ ಮತ್ತು ಅವರ ಹಕ್ಕುಗಳ ರಕ್ಷಣೆಗೆ ನಾವು ಬದ್ಧ ಎಂದ ಅವರು, ಬಿಜೆಪಿಯಲ್ಲಿ ಕಾರ್ಯಕರ್ತರೂ ಮುಖ್ಯಮಂತ್ರಿ ಆಗಬಹುದು. ಅದಕ್ಕೆ ದಲಿತರೂ ಹೊರತಾಗಿಲ್ಲ ಎಂದರು.
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯೇ ಅಭ್ಯರ್ಥಿಗಳನ್ನು ಘೋಷಿಸುತ್ತದೆ. ಈಶ್ವರಪ್ಪ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದು-ಬಿಡುವುದು ನನ್ನ ಮೇಲೆ ಬಿಡಿ, ನಮ್ಮ ಪಕ್ಷದವರ ಹಿತ ಕಾಯುವುದು ನಮ್ಮ ಕೆಲಸ. ಅದಕ್ಕೆ ನೀವು ಏಕೆ ಚಿಂತೆ ಮಾಡ್ತೀರಿ ಎಂದು ಅಮಿತ್ ಶಾ, ಮಾಧ್ಯಮ ಪ್ರತಿನಿಧಿಗಳಲ್ಲಿ ಪ್ರಶ್ನಿಸಿದರು.







