ಪಿಎನ್‌ಬಿ ವಂಚನೆ: ಮಾ.15ರ ಮುಷ್ಕರ ಕೈಬಿಟ್ಟ ಬ್ಯಾಂಕ್ ಯೂನಿಯನ್‌ಗಳು

ಹೊಸದಿಲ್ಲಿ,ಫೆ.26: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಭಾರೀ ವಂಚನೆಯ ಬಳಿಕ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಚಲಿತ ಸ್ಥಿತಿಯ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿಯ ಒಟ್ಟಾರೆ ವಾತಾವರಣವು ಕೆಟ್ಟಿರುವ ಹಿನ್ನೆಲೆಯಲ್ಲಿ ಮಾ.15ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನೀಡಿದ್ದ ಕರೆಯನ್ನು ಹಿಂದೆಗೆದುಕೊಳ್ಳುತ್ತಿರುವುದಾಗಿ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು)ಯು ಸೋಮವಾರ ತಿಳಿಸಿದೆ.
ಹೇಳಿಕೆಯೊಂದರಲ್ಲಿ ಈ ವಿಷಯವನ್ನು ತಿಳಿಸಿರುವ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ(ಎಐಬಿಇಎ)ದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರು, ಪಿಎನ್‌ಬಿಯಲ್ಲಿ ಬೃಹತ್ ವಂಚನೆಯು ನಡೆದ ರೀತಿ ಮತ್ತು ಊಹಿಸಲೂ ಸಾಧ್ಯವಿಲ್ಲದ ಇಂತಹ ಅಪಾಯಗಳಿಗೆ ಬ್ಯಾಂಕುಗಳು ಬಲಿಯಾಗುತ್ತಿರುವ ಬಗ್ಗೆ ಯುಎಫ್‌ಬಿಯು ಗಂಭೀರ ಕಳವಳವನ್ನು ಹೊಂದಿದೆ. ಆದರೆ ಪೂರ್ಣ ಪ್ರಮಾಣದ ತನಿಖೆಯನ್ನು ನಡೆಸುವ ಬದಲು ಕೆಲವು ಕೆಳದರ್ಜೆಯ ಉದ್ಯೋಗಿಗಳು ಮಾತ್ರ ವಂಚನೆಗೆ ಹೊಣೆಗಾರರು ಎಂಬಂತೆ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪಿಎನ್‌ಬಿಯ ನಿಗಾ ವ್ಯವಸ್ಥೆಯನ್ನೂ ಪ್ರಶ್ನಿಸಿರುವ ಯುಎಫ್‌ಬಿಯು, ಆರ್‌ಬಿಐ ಕೂಡ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಹೇಳಿದೆ.





