ಮೈಸೂರು: ಯುವಕನ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ಮೃತ್ಯು

ಮೈಸೂರು,ಫೆ.26: ಪ್ರೀತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅಪ್ರಾಪ್ತೆ ಬಾಲಕಿಯೊರ್ವಳು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಮೈಸೂರಿನ ಉದಯಗಿರಿಯ ಮುನೇಶ್ವರ ನಗರದಲ್ಲಿ ನಡೆದಿದೆ.
ಮೃತಳನ್ನು ರಕ್ಷಿತಾ (15) ಎಂದು ಗುರುತಿಸಲಾಗಿದೆ. ಕಿರುಕುಳ ನೀಡುತ್ತಿದ್ದ ಮುನೇಶ್ವರ ನಗರದ ಯುವಕ ಗಿರೀಶ್ ನಾಪತ್ತೆಯಾಗಿದ್ದಾನೆ.
ಕಳೆದ ಹಲವು ದಿನಗಳಿಂದ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಗಿರೀಶ್, ಮನೆ ಬಿಟ್ಟು ಓಡಿಹೋಗಿ ಮದುವೆಯಾಗೋಣ ಎಂದು ಒತ್ತಡ ಹೇರಿದ್ದ. ಮದುವೆ ಆಗಲು ಒಪ್ಪದಿದ್ದಲ್ಲಿ ಮನೆಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ಗಿರೀಶನ ಬೆದರಿಕೆಗೆ ಹೆದರಿ ಫೆ.21 ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರಕ್ಷಿತಾ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೋಕ್ಸೋ ಕಾಯಿದೆಯಡಿ ನಾಪತ್ತೆಯಾದ ಗಿರೀಶನ ಬಂಧನಕ್ಕೆ ಉದಯಗಿರಿ ಪೊಲೀಸರು ಬಲೆ ಬೀಸಿದ್ದಾರೆ.





