ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ: ಸದಾನಂದಗೌಡ

ಬೆಂಗಳೂರು, ಫೆ. 26: ಅತ್ಯಂತ ಹಿಂದುಳಿದ ಪ್ರದೇಶಗಳೆಂದು ಗುರುತಿಸಲಾಗಿರುವ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲು ಕೇಂದ್ರ ನೀತಿ ಆಯೋಗ ತೀರ್ಮಾನಿಸಿದ್ದು, ಅಭಿವೃದ್ದಿಗೆ ನೀಲನಕ್ಷೆ ಸಿದ್ಧಪಡಿಸಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ರಮೇಶ್ ಜಿಗಜಿಣಗಿ ಉಪಸ್ಥಿತಿಯಲ್ಲಿ ಅಧಿಕಾರಿಗಳೊಂದಿಗೆ ರಾಜ್ಯದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ನೀತಿ ಆಯೋಗ ದೇಶದ 115 ಜಿಲ್ಲೆಗಳನ್ನು ಹಿಂದುಳಿದ ಪ್ರದೇಶಗಳೆಂದು ಗುರುತಿಸಿ, ಅವುಗಳ ಅಭಿವೃದ್ಧಿಗೆ ಮುಂದಾಗಿದೆ ಎಂದರು.
ದೇಶದ ಎಲ್ಲ ಭಾಗವೂ ಅಭಿವೃದ್ಧಿಯಾದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದು ಪ್ರಧಾನಿ ಮೋದಿಯವರ ಆಶಯ. ಹೀಗಾಗಿ ದೇಶದಲ್ಲಿ ಹಿಂದುಳಿದ ಜಿಲ್ಲೆಗಳ ಪಟ್ಟಿ ಮಾಡಲಾಗಿದೆ. ಹಿಂದುಳಿದ ಪ್ರದೇಶಗಳ ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಕರ್ಯಗಳು ಸೇರಿ ಆದ್ಯತೆ ಕ್ಷೇತ್ರಗಳನ್ನು ಗುರುತಿಸಲಾಗಿದೆ ಎಂದರು.
ಶಿಕ್ಷಣ-ಆರೋಗ್ಯಕ್ಕೆ ತಲಾ ಶೇ.30 ಹಾಗೂ ಕೃಷಿ, ಮೂಲಸೌಲಭ್ಯಕ್ಕೆ ತಲಾ ಶೇ.40ರಷ್ಟು ಅನುದಾನ ನೀಡಲಾಗುವುದು. ಈ ಯೋಜನೆ ಅನುಷ್ಠಾನದಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ಕೇವಲ ಸಲಹೆ-ಸೂಚನೆಗಳನ್ನು ನೀಡಿ, ಉಸ್ತುವಾರಿ ನೋಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೇಸರ: ನೀತಿ ಆಯೋಗದ ಸಭೆಗೆ ರಾಜ್ಯ ಸರಕಾರದ ಯೋಜನಾ ಸಚಿವರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಪಾಲ್ಗೊಂಡಿಲ್ಲ. ಈ ವಿಷಯದಲ್ಲಿ ತಾನು ರಾಜಕೀಯ ಬೆರೆಸುವುದಿಲ್ಲ. ಪ್ರಧಾನಿ ನಿರ್ದೇಶನದ ಹಿನ್ನೆಲೆಯಲ್ಲಿ ಸಭೆ ನಡೆಸುತ್ತಿದ್ದು, ಪಕ್ಷ ರಾಜಕೀಯದ ಹೊರತು ಅಭಿವೃದ್ಧಿಗೆ ಚಿಂತಿಸಬೇಕಿದೆ ಎಂದು ಹೇಳಿದರು.







