'ಅಪ್ಪ ಇರುತ್ತಿದ್ದರೆ ತುಂಬಾ ಖುಷಿ ಪಡುತ್ತಿದ್ದರು'
ಮಂಗಳೂರು ವಿವಿ ಘಟಿಕೋತ್ಸವ: ಝರಿನಾ ಬಾನುಗೆ ಎರಡು ಚಿನ್ನದ ಪದಕ

ಕೊಣಾಜೆ, ಫೆ. 26: ಬಂಟ್ವಾಳ ಮಂಡಾಡಿಯ ದಿ. ಯೂಸೂಫ್ ಮತ್ತು ಸಫಿಯಾ ದಂಪತಿಯ ಪುತ್ರಿ ಝರಿನಾ ಭಾನು ಕೆ ಅವರು ಎಂಕಾಂ ಸ್ನಾತಕೋತ್ತರ ವಿಭಾಗದಲ್ಲಿ ಎರಡು ಚಿನ್ನದ ಪದಕವನ್ನು ಸೋಮವಾರ ನಡೆದ ಘಟಿಕೋತ್ಸವದಲ್ಲಿ ಪಡೆದುಕೊಂಡರು.
ಚಿನ್ನದ ಪದಕವನ್ನು ಪಡೆದ ಝರಿನಾ 'ವಾರ್ತಾಭಾರತಿ'ಯೊಂದಿಗೆ ಖುಷಿಯನ್ನು ಹಂಚಿಕೊಂಡರು.
ಸಣ್ಣ ವಯಸ್ಸಿನಲ್ಲಿಯೇ ಉಪನ್ಯಾಸಕಿ ಆಗಬೇಕೆಂಬುದು ನನ್ನ ಕನಸಾಗಿತ್ತು. ಅದಕ್ಕೆ ಸತತವಾಗಿ ಶ್ರಮಪಟ್ಟು ಓದುತ್ತಿದ್ದೆ. ಪದವಿಯಲ್ಲೂ ಉತ್ತಮ ಅಂಕಗಳನ್ನು ಗಳಿಸಿಕೊಂಡಿದ್ದೆ. ಆದರೆ ಎಂಕಾಂನಲ್ಲಿ ರ‍್ಯಾಂಕ್ ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಇದೀಗ ರ‍್ಯಾಂಕ್ನೊಂದಿಗೆ ಎರಡು ಚಿನ್ನದ ಪದಕ ಲಭಿಸಿರುವುದು ಖುಷಿ ತಂದಿದೆ. ನನ್ನ ಸಾಧನೆಗೆ ತಂದೆ ತಾಯಿಯರೇ ಕಾರಣರಾಗಿದ್ದಾರೆ. ತಂದೆ ಕೂಲಿ ಕೆಲಸ ಮಾಡಿಕೊಂಡಿದ್ದರೂ ನನ್ನ ವಿದ್ಯಾಭ್ಯಾಸಕ್ಕೆ ಒಳ್ಳೆಯ ಪ್ರೋತ್ಸಾಹವನ್ನೇ ಕೊಡುತ್ತಾ ಬಂದಿದ್ದರು. ನಾನು ಉಪನ್ಯಾಸಕಿ ಆಗಬೇಕು ಎನ್ನುತ್ತಿದ್ದಾಗ ನನ್ನ ಶಿಕ್ಷಣಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದರು. ಆದರೆ ತಂದೆ ಎರಡು ವರ್ಷಗಳ ಹಿಂದೆ ನಿಧನರಾದರು. ಒಂದು ವೇಳೆ ಅವರು ಇರುತ್ತಿದ್ದರೆ ಈಗ ತುಂಬಾ ಖುಷಿ ಪಡುತ್ತಿದ್ದರು ಎಂದು ಝರಿನಾ ತಿಳಿಸಿದ್ದಾರೆ.





