ಬೆಂಗಳೂರು: 7ನೆ ದಿನಕ್ಕೆ ಕಾಲಿಟ್ಟ ಕೋರೆ ಮತ್ತು ಸ್ಟೋನ್ ಕ್ರಷರ್ಸ್ ಮಾಲಕರ ಪ್ರತಿಭಟನೆ
ಬೆಂಗಳೂರು ಫೆ.26: ಅಧಿಕಾರಿಗಳು ಅನಗತ್ಯವಾಗಿ ಕಿರುಕುಳ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೋರೆ ಮತ್ತು ಸ್ಟೋನ್ ಕ್ರಷರ್ಸ್ ಮಾಲಕರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 7ನೆ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯದೆಲ್ಲೆಡೆ ಕ್ರಷರ್ ಹಾಗೂ ಕೋರೆ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮುಂದುವರೆಸಲಾಗಿದೆ.
ಸೋಮವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಕೋರೆ ಮತ್ತು ಸ್ಟೋನ್ ಕ್ರಷರ್ಸ್ ಮಾಲಕರ ಸಂಘದ ಅಧ್ಯಕ್ಷ ಸಂಜೀವ ಹಟ್ಟಿಹೊಳೆ, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆಲ್ಲದೆ, 2017ರ ಜೂನ್‌ನಲ್ಲಿ ನೀಡಿದ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ, ಕೋರೆ ಗುತ್ತಿಗೆ ನವೀಕರಣ, ಪರಿಗಣಿತ ಭೂ ಪರಿವರ್ತನೆ ಹಾಗೂ ರಾಜಧನ ಪಾವತಿಯ ವಿಚಾರದಲ್ಲಿ ರಾಜ್ಯ ಸರಕಾರ ದ್ವಂದ್ವ ನಿಲುವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಫೆ.22ರಿಂದ ಆರಂಭವಾಗಿರುವ ನಮ್ಮ ಪ್ರತಿಭಟನೆ ರಾಜ್ಯದ ಎಲ್ಲ ಕ್ರಷರ್ ಹಾಗೂ ಕೋರೆಗಳಲ್ಲಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದೇವೆ ಎಂದ ಅವರು, ಈಗಾಗಲೇ ಕಟ್ಟಡ ಕಾಮಗಾರಿಗಳಿಗೆ ಅಗತ್ಯ ಸಾಮಗ್ರಿಗಳು ದೊರಕದೆ ತೀವ್ರ ಅನಾನುಕೂಲವಾಗಿದೆ ಎಂದರು.
ವಂಚನೆ: ಈ ಹಿಂದೆ ಪ್ರತಿಭಟನೆ ಮಾಡುತ್ತಿದ್ದ ನಮ್ಮನ್ನು ನಂಬಿಸಿದ ಸಚಿವರು ಬೇಡಿಕೆ ಈಡೇರಿಸದೆ ವಂಚಿಸಿದ್ದಾರೆ. ಅಲ್ಲದೆ, ನಾವು ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದ್ದು, ಸಾಂಕೇತಿಕವಾಗಿ ನಗರದ ರಸ್ತೆಗಳಲ್ಲಿ ಜಲ್ಲಿಕಲ್ಲುಗಳನ್ನು ಸುರಿಯುವ ಮೂಲಕ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.







