ಮಹಿಳಾ ಉದ್ಯೋಗಿಗಳಿಗಾಗಿ ಇಂದಿರಾ ಸಾರಿಗೆ: ಎಚ್.ಎಂ.ರೇವಣ್ಣ

ಬೆಂಗಳೂರು, ಫೆ.26: ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ಜಾರಿಗೆ ತರಲು ಉದ್ದೇಶಿಸಿರುವ ಇಂದಿರಾ ಸಾರಿಗೆ ಸೇವೆಗೆ ಶೀಘ್ರವೆ ಚಾಲನೆ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಸೋಮವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ಇನ್ನಿತರರೊಂದಿಗೆ ಈಗಾಗಲೆ ಮೂರು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದರು.
ಬೆಂಗಳೂರು ಸುತ್ತಮುತ್ತಲು ಕೆಲಸ ಮಾಡುತ್ತಿರುವ ಸುಮಾರು ಎರಡು ಲಕ್ಷ ಮಹಿಳಾ ಕಾರ್ಮಿಕರಿಗೆ ಇಂದಿರಾ ಸಾರಿಗೆ ಸೇವೆಯಿಂದ ಪ್ರಯೋಜನವಾಗಲಿದೆ. ಬೆಂಗಳೂರು ನಗರದ ವ್ಯಾಪ್ತಿಯೊಳಗಿನ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು ಹಾಗೂ ಹೊರಗಿನ ಪ್ರದೇಶಗಳಿಂದ ಬೆಂಗಳೂರಿಗೆ ಬರುವ ಕಾರ್ಮಿಕರಿಗೆ ಪ್ರತ್ಯೇಕವಾದ ಪಾಸ್‌ಗಳನ್ನು ನೀಡಲಾಗುವುದು ಎಂದು ಅವರು ವಿವರಣೆ ನೀಡಿದರು.
ಬೆಂಗಳೂರು ನಗರದಲ್ಲಿ ಇರುವ ಮಹಿಳಾ ಕಾರ್ಮಿಕರಿಗೆ ಬಿಎಂಟಿಸಿಯಿಂದ ಹಾಗೂ ಹೊರಗಿನ ಪ್ರದೇಶಗಳಿಂದ ಬೆಂಗಳೂರಿಗೆ ಬರುವವರಿಗೆ ಕೆಎಸ್ಸಾರ್ಟಿಸಿಯಿಂದ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಈ ಸಂಬಂಧ ಗಾರ್ಮೆಂಟ್ಸ್ ಮಾಲಕರೊಂದಿಗೂ ಚರ್ಚಿಸಿ ಸಹಮತ ಪಡೆಯಲಾಗಿದೆ ಎಂದು ರೇವಣ್ಣ ಹೇಳಿದರು.
ಮೆಜೆಸ್ಟಿಕ್ ಹಾಗೂ ಯಶವಂತಪುರ ಬಸ್ ನಿಲ್ದಾಣಗಳಲ್ಲಿ ಸ್ಥಾಪಿಸಲಿರುವ ಇಂದಿರಾ ಕ್ಲಿನಿಕ್‌ಗೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲೂ ಇಂದಿರಾ ಕ್ಲಿನಿಕ್ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ರಸ್ತೆ ಅಪಘಾತಗಳಿಗೆ ಈಡಾಗುವವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ‘ಗೋಲ್ಡನ್ ಅವರ್’ ಯೋಜನೆಯನ್ನು ಜಾರಿಗೊಳಿಸಿದ್ದು, ಒಂದು ಆಂಬ್ಯುಲೆನ್ಸ್‌ನಲ್ಲಿ ತೀವ್ರ ಸ್ವರೂಪದ ಅಪಘಾತಕ್ಕೆ ಒಳಗಾದ 10 ಮಂದಿ ಅಥವಾ ಸಣ್ಣಪುಟ್ಟ ಗಾಯಗೊಂಡ 16 ಮಂದಿಯನ್ನು ಏಕಕಾಲಕ್ಕೆ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಇದಾಗಿದೆ ಎಂದು ರೇವಣ್ಣ ಹೇಳಿದರು.
ಈ ವಾಹನದಲ್ಲಿ ಆರ್ಥೋ, ಆಮ್ಲಜನಕ ಸೇವೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಇಡೀ ದೇಶದಲ್ಲೆ ಇದೊಂದು ವಿನೂತನ ಯೋಜನೆಯಾಗಿದ್ದು, ಈಗಾಗಲೆ ಬೆಂಗಳೂರಿನಲ್ಲಿ ಈ ಯೋಜನೆಯಲ್ಲಿ ಜಾರಿಯಲ್ಲಿದ್ದು, ಇದನ್ನು ರಾಜ್ಯದ ಇತರ ನಗರ ಪ್ರದೇಶಗಳಿಗೂ ವಿಸ್ತರಿಸುವಂತೆ ಬೇಡಿಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕನಕದಾಸ ಪ್ರತಿಮೆ ಅನಾವರಣ: ವಿಧಾನಸೌಧದ ಆವರಣದಲ್ಲಿ ಮಾ.2ರಂದು ಸಂಜೆ 5 ಗಂಟೆಗೆ ದಾಸಶ್ರೇಷ್ಠ ಕನಕದಾಸರ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೇವಣ್ಣ ಹೇಳಿದರು.
ಸುಮಾರು ಎರಡು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆಯು 12 ಅಡಿ ಎತ್ತರ, 1200 ಕೆ.ಜಿ.ಲೋಹದಿಂದ ತಯಾರಿಸಲಾಗಿದೆ. ಕಲಾವಿದ ಅಶೋಕ ಗುಡಿಗಾರ್ ಈ ಪ್ರತಿಮೆಯನ್ನು ರೂಪಿಸಿದ್ದಾರೆ. ಶಾಸಕರ ಭವನದ ಪ್ರವೇಶದ್ವಾರದ ಬಳಿ ಸ್ಥಾಪನೆಯಾಗಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆ ಸಮೀಪದಲ್ಲೆ ಈ ಪ್ರತಿಮೆ ಅನಾವರಣಗೊಳ್ಳಲಿದೆ ಎಂದು ಅವರು ಹೇಳಿದರು.
ವಿಧಾನಸೌಧದ ಆವರಣದಲ್ಲಿ ಕನಕದಾಸರ ಪ್ರತಿಮೆ ಅನಾವರಣ ಮಾಡಬೇಕು ಎನ್ನುವುದು ಸಮುದಾಯದ ಬಹುದಿನದ ಬೇಡಿಕೆಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ರೇವಣ್ಣ ತಿಳಿಸಿದರು.







