ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸರಕಾರಕ್ಕೆ ನ್ಯಾ.ಕೇಶವ ನಾರಾಯಣ ಆಯೋಗದ ವರದಿ ಸಲ್ಲಿಕೆ

ಬೆಂಗಳೂರು, ಫೆ.26: ಮಡಿಕೇರಿಯಲ್ಲಿ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೂವರೆ ವರ್ಷದ ಬಳಿಕ ನ್ಯಾ.ಕೇಶವ ನಾರಾಯಣ ನೇತೃತ್ವದ ತನಿಖಾ ಆಯೋಗವು ಸರಕಾರಕ್ಕೆ 320 ಪುಟಗಳ ವರದಿ ಸಲ್ಲಿಸಿದೆ.
ಸೋಮವಾರ ವಿಕಾಸಸೌಧದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿಗೆ ವರದಿ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾ.ಕೇಶವ ನಾರಾಯಣ, ಸರಕಾರಕ್ಕೆ ವರದಿ ಒಪ್ಪಿಸಲಾಗಿದೆ. ಈ ವರದಿ ಕುರಿತು ತೀರ್ಮಾನ ಕೈಗೊಳ್ಳಲು ಸರಕಾರಕ್ಕೆ ಅವಕಾಶವಿದೆ ಎಂದರು.
ಈ ವರದಿಯು ಸತ್ಯಶೋಧನಾ ಸಮಿತಿಯ ರೀತಿಯಲ್ಲಿದೆ. ನಮ್ಮ ಮುಂದೆ ಯಾರೂ ಆರೋಪಿಗಳು ಇರುವುದಿಲ್ಲ. ಒಟ್ಟು 50 ಸಾಕ್ಷಗಳನ್ನು ವಿಚಾರಣೆ ಮಾಡಲಾಗಿದೆ. 320 ಪುಟಗಳ ವರದಿ ಇದಾಗಿದೆ ಎಂದು ಕೇಶವ ನಾರಾಯಣ ಹೇಳಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಇದೀಗ ತಾನೆ ನ್ಯಾ.ಕೇಶವ ನಾರಾಯಣ ಆಯೋಗದ ವರದಿ ಬಂದಿದೆ. ಒಂದೂವರೆ ವರ್ಷದ ಸಮಯವನ್ನು ಆಯೋಗ ತೆಗೆದುಕೊಂಡಿದೆ. ಈ ವರದಿಯನ್ನು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಈ ವರದಿಯನ್ನು ಹಸ್ತಾಂತರಿಸಿ ಪರಿಶೀಲಿಸಲಾಗುವುದು. ಅಲ್ಲದೆ, ಸಚಿವ ಸಂಪುಟ ಸಭೆಯಲ್ಲೂ ಈ ವರದಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಿಂದಿನ ಗೃಹ ಸಚಿವ ಕೆ.ಜೆ.ಜಾರ್ಜ್‌ರನ್ನು ಕರೆಸಿ ವಿಚಾರಣೆಗೊಳಪಡಿಸಿಲ್ಲ. ಒತ್ತಡದಿಂದ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ ಎಂದು ತಿಳಿದು ಬಂದಿದೆ.







