ಗೋವನಿತಾಶ್ರಯದಲ್ಲಿ ಸಮಾಜ ಘಾತುಕ ಶಕ್ತಿಗಳಿಗೆ ಆಶ್ರಯ: ಸೂಕ್ತ ಕ್ರಮಕ್ಕೆ ಮುಸ್ಲಿಂ ಸೌಹಾರ್ದ ವೇದಿಕೆ ಮನವಿ

ಮಂಗಳೂರು, ಫೆ. 26: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಬಂಟ್ವಾಳ ತಾಲೂಕಿನ ಪಜೀರ್ ಗ್ರಾಮದ ಬೀಜಗುರಿ ಎಂಬಲ್ಲಿರುವ ಗೋವನಿತಾಶ್ರಯದಲ್ಲಿ ಸಮಾಜ ಘಾತುಕ ಶಕ್ತಿಗಳಿಗೆ ಆಶ್ರಯ ನೀಡಲಾಗಿದೆ ಎಂದು ಆರೋಪಿಸಿರುವ ಮಲಾರ್‌ನ ಮುಸ್ಲಿಂ ಸೌಹಾರ್ದ ವೇದಿಕೆಯು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದೆ.
ಹೊಸಂಗಡಿಯಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಗೋವನಿತಾಶ್ರಯದಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಪಡೆದ ಮಂಜೇಶ್ವರ ಮತ್ತು ಕೊಣಾಜೆ ಪೊಲೀಸರು ಫೆ.22ರಂದು ದಾಳಿ ನಡೆಸಿದ್ದರು. ಈ ಸಂದರ್ಭ ಆರೋಪಿಗಳ ಪೈಕಿ ಇಬ್ಬರನ್ನು ಸ್ಥಳೀಯರ ನೆರವಿನಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರೆ, ಇಬ್ಬರು ಪರಾರಿಯಾಗಿದ್ದರು. ಗೋವುಗಳ ಸಾಕಣೆ ಕೇಂದ್ರವಾಗಬೇಕಿದ್ದ ಗೋವನಿತಾಶ್ರಯದಲ್ಲಿ ಸಮಾಜಘಾತುಕ ಶಕ್ತಿಗಳಿಗೆ ಆಶ್ರಯ ನೀಡುತ್ತಿರುವುದು ಗಂಭೀರ ವಿಚಾರ. ಇದಕ್ಕೆ ನೆರವು ನೀಡುತ್ತಿರುವ ಎಲ್ಲರ ಮೇಲೂ ಕಠಿಣ ಕ್ರಮ ಜರಗಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.
ಘಟನೆಗೆ ಸಂಬಂಧಿಸಿದಂತೆ ಗೋವನಿತಾಶ್ರಯದ ಗೌರವಾಧ್ಯಕ್ಷ ಹಾಗೂ ವಿಹಿಂಪ ಮುಖಂಡ ಎಂ.ಬಿ.ಪುರಾಣಿಕ್‌ರನ್ನು ಬಂಧಿಸಬೇಕು. ಇದರ ಹಿಂದಿರುವ ನಿಗೂಢ ಶಕ್ತಿಯನ್ನು ಬಯಲಿಗೆಳೆಯಬೇಕು. ಗೋವನಿತಾಶ್ರಯದ ಸುತ್ತಮುತ್ತ ಸಿಸಿ ಕ್ಯಾಮರಾ ಅಳವಡಿಸಿ ಅಲ್ಲಿನ ಚಲನವಲನಗಳ ಬಗ್ಗೆ ನಿಗಾ ಇಡಬೇಕು ಎಂದು ವೇದಿಕೆ ಒತ್ತಾಯಿಸಿದೆ.
ವೇದಿಕೆಯ ಸಂಚಾಲಕರಾದ ನಿಸಾರ್ ಮಲಾರ್, ಹಾರಿಸ್ ಮಲಾರ್, ಪ್ರಮುಖರಾದ ಝಾಹಿದ್ ಮಲಾರ್, ಝಕರಿಯಾ ಮಲಾರ್, ಕಬೀರ್, ನೌಷಾದ್, ರಿಝ್ವನ್, ಟಿ. ನಾಸಿರ್, ಅಶ್ರಫ್ ಮದೀನಾ ಮತ್ತಿತರರು ನಿಯೋಗದಲ್ಲಿದ್ದರು.







