ಶಾಸಕರಿಗೆ ಕಾನೂನಿನಲ್ಲಿಯೇ ಅವಕಾಶವಿದೆ: ಹೈಕೋರ್ಟ್ ಮೌಖಿಕ ಅಭಿಪ್ರಾಯ
ಲೋಕಾಯುಕ್ತ, ಉಪಲೋಕಾಯುಕ್ತರ ಪದಚ್ಯುತಿಗೆ ನಿರ್ಣಯ ಮಂಡನೆ

ಬೆಂಗಳೂರು, ಫೆ.26: ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ಪದಚ್ಯುತಿಗೆ ನಿರ್ಣಯ ಮಂಡಿಸಲು ಶಾಸಕರಿಗೆ ಕಾನೂನಿನಲ್ಲಿಯೇ ಅವಕಾಶವಿದೆ. ಒಂದೊಮ್ಮೆ ಮಂಡಿಸಿದ ನಿರ್ಣಯವು ವಿಫಲತೆ ಸಾಧಿಸಿದರೂ ಅದು ಅಪರಾಧವಾಗುವುದಿಲ್ಲ ಮತ್ತು ಅದಕ್ಕಾಗಿ ಶಾಸಕರ ವಿರುದ್ಧ ಕ್ರಮ ಜರುಗಿಸಲಾಗದು ಎಂದು ಹೈಕೋರ್ಟ್ ವೌಖಿಕ ಅಭಿಪ್ರಾಯಪಟ್ಟಿದೆ.
ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಿದ್ದ 78 ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮ ಜರುಗಿಸಲು ಕೋರಿ ಸಲ್ಲಿಸಿದ್ದ ದೂರು ವಜಾಗೊಳಿಸಿದ್ದ ಲೋಕಾಯುಕ್ತ ವಿಶ್ವನಾಥ್ ಪಿ.ಶೆಟ್ಟಿ ಅವರ ಆದೇಶ ರದ್ದುಪಡಿಸುವಂತೆ ಕೋರಿ ನಗರದ ನಿವಾಸಿಗಳಾದ ಆದರ್ಶ್ ಆರ್. ಐಯ್ಯರ್ ಹಾಗೂ ಬಿ.ಕೆ.ಪ್ರಕಾಶ್ ಬಾಬು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಲು ಶಾಸಕರಿಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕಾಯ್ದೆಯ ಸೆಕ್ಷನ್ 6(10) ಪ್ರಕಾರ ಸದನದ ಮೂರನೇ ಒಂದು ಭಾಗದ ಶಾಸಕರು ಉಪ ಲೋಕಾಯುಕ್ತರ ಪದಚ್ಯುತಿಗೆ ನಿರ್ಣಯ ಮಂಡಿಸಿದ್ದು, ಆ ಕ್ರಮ ಅಪರಾಧ ಕೃತ್ಯ ಆಗುವುದಿಲ್ಲ. ಮಂಡಿಸಿದ ನಿರ್ಣಯವು ವಿಫಲಗೊಂಡರೆ ಅದು ಯಾವುದೇ ಪರಿಣಾಮ ಸೃಷ್ಟಿಸುವುದಿಲ್ಲ. ಅದಕ್ಕಾಗಿ ಶಾಸಕರ ವಿರುದ್ಧ ಕ್ರಮ ಜರುಗಿಸಲಾಗುವುದಿಲ್ಲ ಎಂದು ವೌಖಿಕವಾಗಿ ಹೇಳಿತು.
ಆದರ್ಶ ಆರ್. ಐಯ್ಯರ್ ವಾದ ಮಂಡಿಸಿ, ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಪಕ್ಷದ 78 ಶಾಸಕರು ಸದನದಲ್ಲಿ ಪದಚ್ಯುತಿ ನಿರ್ಣಯ ಮಂಡಿಸಿದ್ದರು. ಆ ನಿರ್ಣಯದ ಮೇಲೆ ತನಿಖೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರು, ಉಪ ಲೋಕಾಯುಕ್ತರ ವಿರುದ್ಧದ ಆರೋಪಗಳನ್ನು ಕೈ ಬಿಟ್ಟಿದ್ದರು. ಹೀಗಾಗಿ, ಅನಗತ್ಯವಾಗಿ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಿ ಅವರ ಘನತೆಗೆ ಧಕ್ಕೆ ತಂದ ಕಾರಣ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕಿದೆ. ಈ ಕುರಿತು ನಾನು ಸಲ್ಲಿಸಿದ ದೂರು ತಿರಸ್ಕರಿಸಿದ ಲೋಕಾಯುಕ್ತರ ಕ್ರಮ ಕಾನೂನು ಬಾಹಿರ ಎಂದರು.
ಈ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ನ್ಯಾಯಮೂರ್ತಿ ರಮೇಶ್, ಉಪ ಲೋಕಾಯುಕ್ತರ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಲು ಕಾನೂನಿನಲ್ಲಿಯೇ ಅವಕಾಶ ಇರುವಾಗ ನ್ಯಾಯಾಲಯ ಏನು ಮಾಡಲಾಗದು. ಶಾಸನ ರಚಿಸಲು ಶಾಸನ ಸಭೆ ಇದೆ. ನಾವು ಇಲ್ಲಿ ಕೂತು ಕಾನೂನು ರೂಪಿಸಲು ಸಾಧ್ಯವಿಲ್ಲ. ಹೀಗಾಗಿ, ನೀವು ಪ್ರಕರಣದಲ್ಲಿ ಮತ್ತಷ್ಟು ಸಂಶೋಧನೆ ನಡೆಸಿ ಕೋರ್ಟ್‌ಗೆ ಮಾಹಿತಿ ನೀಡಬಹುದು. ಇಲ್ಲವೇ ಅರ್ಜಿ ಕುರಿತು ಈಗಲೇ ಆದೇಶ ಹೊರಡಿಸುವುದಾಗಿ ಅರ್ಜಿದಾರರಿಗೆ ತಿಳಿಸಿದರು.
ಅರ್ಜಿದಾರರು ಪ್ರತಿಕ್ರಿಯಿಸಿ ಪ್ರಕರಣದ ಕುರಿತು ಮತ್ತಷ್ಟು ಮಾಹಿತಿ ಸಂಗ್ರಹಿಸಿ ವಾದ ಮಂಡಿಸುವುದಾಗಿ ತಿಳಿಸಿದರು. ಇದರಿಂದ ನ್ಯಾಯಪೀಠ ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಿತು.







