ನಿವೇಶನ ಹಂಚಿಕೆ ನೆಪದಲ್ಲಿ ಶಾಸಕರಿಂದ ಸುಳ್ಳು ಭರವಸೆ: ಸುನೀಲ್ ಕುಮಾರ್ ಬಜಾಲ್
ಮಂಗಳೂರು, ಫೆ.26: ಬಡವರಿಗೆ ನಿವೇಶನ ಹಂಚಿಕೆ ವಿಚಾರದಲ್ಲಿ ನಿರಂತರವಾಗಿ ಸುಳ್ಳು ಭರವಸೆಗಳನ್ನು ನೀಡಿ ನಿವೇಶನರಹಿತರನ್ನು ದಾರಿ ತಪ್ಪಿಸುತ್ತಿ ರುವ ಶಾಸಕ ಜೆ.ಆರ್.ಲೋಬೊರವರಿಂದ ಫ್ಲ್ಯಾಟ್ ಹಂಚಿಕೆ ಎಂಬುದು ಕೇವಲ ಚುನಾವಣಾ ತಂತ್ರವಾಗಿದೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.
ಕಳೆದ 5 ವರ್ಷಗಳ ಅವಧಿಯಲ್ಲಿ ನಿವೇಶನ ರಹಿತರು ಹಲವು ಬಾರಿ ಹೋರಾಟಗಳನ್ನು ಕೈಗೊಂಡಾಗ ಅದಕ್ಕೆ ಕಿಂಚಿತ್ತೂ ಗಮನವನ್ನು ನೀಡದ ಶಾಸಕರು, ಸ್ವತಃ ತಾನು ಅಧ್ಯಕ್ಷರಾಗಿರುವ ಆಶ್ರಯ ಸಮಿತಿ ಸಭೆಯನ್ನು ಒಂದು ಬಾರಿಯೂ ನಡೆಸಿಲ್ಲ. ಈಗ ಚುನಾವಣೆ ಹತ್ತಿರ ಬಂದಿರುವ ಸಂದರ್ಭ ಫ್ಲ್ಯಾಟ್ ಹಂಚಿಕೆ, ಗುದ್ದಲಿ ಪೂಜೆ, ಪ್ರಮಾಣ ಪತ್ರ ವಿತರಣೆಯಂತಹ ನಾಟಕವಾಡಿ ಬಡವರನ್ನು ವಂಚಿಸಲಾಗುತ್ತಿದೆ. ಮುಖ್ಯಮಂತ್ರಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಸುಳ್ಳು ಹೇಳಿದ ಶಾಸಕರು ಇಂದಿನವರೆಗೂ ಆಯ್ಕೆಗೊಂಡವರಿಗೆ ಯಾವ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಎಂಬುದರ ಬಗ್ಗೆ ಬಾಯಿ ಬಿಡುತ್ತಿಲ್ಲ. ಈಗಾಗಲೇ ನೀಡಿರುವ ಪ್ರಮಾಣಪತ್ರವು ಜೆರಾಕ್ಸ್ ಪ್ರತಿಯಾಗಿದ್ದು, ಅದು ಸಂಪೂರ್ಣವಾಗಿ ಸಂಶಯಾಸ್ಪದವಾಗಿದೆ. ಪುರಭವನದಲ್ಲಿ ನೀಡಿರುವ ಚೀಟಿಯ ಸಂಖ್ಯೆಗೂ, ಪ್ರಮಾಣ ಪತ್ರದಲ್ಲಿರುವ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ. ಅಲ್ಲದೆ ನಗರಪಾಲಿಕೆಯ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಹಾಗೂ ಶಾಸಕರ ಏಜೆಂಟರಂತೆ ವರ್ತಿಸಿ ಚುನಾವಣಾ ಪ್ರಚಾರ ನಡೆಸುತ್ತಿರುವುದು ಖಂಡನೀಯ. ಶಕ್ತಿನಗರದಲ್ಲಿ ಮೀಸಲಿರಿಸಿದ ಜಾಗವನ್ನು ಸಮತಟ್ಟು ಮಾಡಿಲ್ಲ. ನಿರ್ಮಾಣದ ಯಾವ ಪ್ರಕ್ರಿಯೆಯೂ ನಡೆದಿಲ್ಲವಾದರೂ, ನಗರದಾದ್ಯಂತ ಶಾಸಕರು ಮನೆ ನಿರ್ಮಾಣವಾಗಿದೆಯೆಂದು ಬಿಂಬಿಸುವಂತಹ ದೊಡ್ಡ ದೊಡ್ಡ ಕಟೌಟ್-ಹೋರ್ಡಿಂಗ್‌ಗಳನ್ನು ಹಾಕುತ್ತಿರುವುದು ಎಷ್ಟು ಸರಿ? ಎಂದು ಸಿಪಿಎಂ ಪ್ರಶ್ನಿಸಿದೆ.





