ನೈತಿಕ ಹಾಗೂ ಕಡ್ಡಾಯ ಮತದಾನಕ್ಕೆ ಸ್ವೀಪ್ ಕಾರ್ಯಕ್ರಮ: ಡಿ.ರಂದೀಪ್
ಮೈಸೂರು,ಫೆ.26: ನೈತಿಕ ಹಾಗೂ ಕಡ್ಡಾಯ ಮತದಾನ ಮಾಡುವ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಕ್ರಮವನ್ನು ಚುನಾವಣೆ ಆಯೋಗದಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2018ನೇ ಕರ್ನಾಟಕ ವಿಧಾನಸಭಾ ಚುನಾವಣೆಯ ಸ್ವೀಪ್ ಲಾಂಛನವನ್ನು ಸೋಮವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಂಗವಿಕಲರಿಗೆ ವೋಟ್ ಮಾಡಲು ರ್ಯಾಂಪ್ ಮತ್ತು ಮೂಲ ಸೌಕರ್ಯ ಒದಗಿಸಲಾಗುವುದು. ಆದಿವಾಸಿ ಬುಡಕಟ್ಟು ಸಮುದಾಯದ ಜನರು ತಪ್ಪದೇ ಮತದಾನ ಮಾಡುವಂತೆ ಸ್ವೀಪ್ ವತಿಯಿಂದ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಅವರು ಮಾತನಾಡಿ ಮತದಾರರ ನೊಂದಣಿ ಹೆಚ್ಚಿಸುವುದು, ಕಡ್ಡಾಯ ಮತದಾನ ಹಾಗೂ ನೈತಿಕ ಮತದಾನ ಮಾಡುವುದು ಸ್ವೀಪ್‍ನ ಮೂಲ ಉದ್ದೇಶವಾಗಿದೆ ಎಂದರು.
ಜಿಲ್ಲೆಯ ತಾಲ್ಲೂಕುವಾರು ಹಾಗೂ ಮೈಸೂರು ನಗರ ಸೇರಿದಂತೆ 8 ಸ್ವೀಪ್ ಸಮಿತಿ ರಚಿಸಿದ್ದು, ಪಿ.ಯು.ಸಿ ಮತ್ತು ಪದವಿ ಮಕ್ಕಳಿಂದ ವಾರದಲ್ಲಿ ಒಂದು ದಿನ ಜಾಥಾವನ್ನು ಹಮ್ಮಿಕೊಂಡು ಯುವ ಮತದಾರರ ನೊಂದಣಿಯಾಗುವಂತೆ ಮಾಡುವುದು. ಸಾಮಾಜಿಕ ಜಾಲಾತಾಣಗಳ ಮೂಲಕ ಯುವಕರನ್ನು ಮತದಾನ ಮಾಡುವಂತೆ ಸೆಳೆಯಲು ಬಳಸಲಾಗುವುದು ಎಂದರು.
ಚಾಮುಂಡಿ ಬೆಟ್ಟದ ಮೇಲೆ ದಸರಾ ಸಂದರ್ಭದಲ್ಲಿ ಸುಸ್ವಾಗತ ಮಾದರಿಯಲ್ಲಿ “ನಿಮ್ಮ ಮತ ನಿಮ್ಮ ಹಕ್ಕು” ಎಂದು ಸಂಜೆ 7 ರಿಂದ ರಾತ್ರಿ 9 ಗಂಟೆವರಗೆ ಹಾಕಲಾಗುವುದು. ಬೂತ್ ಮಟ್ಟದ ಅಧಿಕಾರಿಗಳಿಂದ ಪ್ರತಿಯೊಂದು ಮನೆ ಮನೆಗೆ ಹೋಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
2013 ನೇ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 72.05 ರಷ್ಟು ಮತದಾನ ನಡೆದಿದ್ದು ಈ ಬಾರಿ ಹೆಚ್ಚಿನ ಪ್ರಮಾಣದ ಗುರಿನ್ನು ಹೊಂದಲಾಗಿದೆ. ಮತದಾನದ ಸಮಯದ ಬಗ್ಗೆಯು ಸಹ ತಿಳುವಳಿಕೆ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತರಾದ ರವೀಂದ್ರ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು ಆರ್. ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







