ಕರ್ನಾಟಕಕ್ಕೆ 3ನೇ ಪ್ರಶಸ್ತಿಯ ಕನಸು
ನಾಳೆ ವಿಜಯ್ ಹಝಾರೆ ಟ್ರೋಫಿ ಫೈನಲ್

ಹೊಸದಿಲ್ಲಿ, ಫೆ.26: ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್‌ನ ಫೈನಲ್ ಪಂದ್ಯ ಮಂಗಳವಾರ ಇಲ್ಲಿನ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳ ನಡುವೆ ನಡೆಯಲಿದೆ.
ಕರ್ನಾಟಕ 5 ವರ್ಷಗಳಲ್ಲಿ 3ನೇ ಬಾರಿ ವಿಜಯ್ ಹಝಾರೆ ಟ್ರೋಫಿ ಜಯಿಸುವ ಕನಸು ಕಾಣುತ್ತಿದೆ. ಮತ್ತೊಂದೆಡೆ ಸೌರಾಷ್ಟ್ರ ತಂಡ 10 ವರ್ಷಗಳ ಕನಸು ನನಸು ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.
ಟೂರ್ನಿ ಆರಂಭಕ್ಕೆ ಮೊದಲೇ ಫೇವರಿಟ್ ಪಟ್ಟ ಕಟ್ಟಿಕೊಂಡಿದ್ದ ಕರ್ನಾಟಕ ಟೂರ್ನಿಯಲ್ಲಿ ಈತನಕ ಒಂದು ಪಂದ್ಯ ಮಾತ್ರ ಸೋತಿದೆ. ತಂಡದ ಬ್ಯಾಟಿಂಗ್ ಶಕ್ತಿಯಾಗಿರುವ ಮಾಯಾಂಕ್ ಅಗರವಾಲ್ ಈ ಋತುವಿನಲ್ಲಿ ಒಟ್ಟು 2,051 ರನ್ ಗಳಿಸಿದ್ದಾರೆ. ಹೈದರಾಬಾದ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಶತಕ ಸಿಡಿಸಿದ್ದ ಮಾಯಾಂಕ್ ಸೆಮಿ ಫೈನಲ್‌ನಲ್ಲಿ ಮಹಾರಾಷ್ಟ್ರ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದರು. ಮಾಯಾಂಕ್ ಏಳು ಇನಿಂಗ್ಸ್‌ನಲ್ಲಿ ಆರನೇ ಬಾರಿ 80ಕ್ಕೂ ಅಧಿಕ ರನ್ ಗಳಿಸಿ ತಂಡದ ಯಶಸ್ಸಿಗೆ ಕಾಣಿಕೆ ನೀಡಿದ್ದಾರೆ. ಮಾಯಾಂಕ್ ಟೂರ್ನಿಯಲ್ಲಿ ಒಟ್ಟು 633 ರನ್ ಗಳಿಸಿ ತಂಡದ ಪರ ಅಗ್ರ ಸ್ಕೋರರ್ ಎನಿಸಿಕೊಂಡಿದ್ದಾರೆ. ತಂಡದ ಇತರ ನಾಲ್ವರು ಅಗ್ರ ಕ್ರಮಾಂಕದ ದಾಂಡಿಗರು 250ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಕರ್ನಾಟಕ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬೌಲರ್‌ಗಳ ಗಾಯದ ಸಮಸ್ಯೆ ಎದುರಿಸುತ್ತಿದೆ. ಆದಾಗ್ಯೂ ಯುವ ಬೌಲರ್‌ಗಳು ತಮಗೆ ಲಭಿಸಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಪ್ರಸಿದ್ಧ ಕೃಷ್ಣ, ಪ್ರದೀಪ್ ಟಿ, ರೋನಿತ್ ಮೋರೆ, ಆಫ್ ಸ್ಪಿನ್ನರ್ ಕೆ.ಗೌತಮ್ ಉತ್ತಮ ಪ್ರದರ್ಶನ ನೀಡಿದ್ದಾರೆ. 2014-15ರ ಋತುವಿನಲ್ಲಿ ರಣಜಿ ಟ್ರೋಫಿ, ಇರಾನಿ ಕಪ್ ಹಾಗೂ ವಿಜಯ್ ಹಝಾರೆ ಟ್ರೋಫಿಗಳನ್ನು ಜಯಿಸಿದ್ದ ಕರ್ನಾಟಕ ಈ ಬಾರಿ ಹಝಾರೆ ಟ್ರೋಫಿ ಜಯಿಸುವ ವಿಶ್ವಾಸ ಮೂಡಿಸಿದೆ.
ಮತ್ತೊಂದೆಡೆ ಸ್ಥಿರ ಪ್ರದರ್ಶನ ನೀಡಲು ಯತ್ನಿಸುತ್ತಿರುವ ಸೌರಾಷ್ಟ್ರ ಪ್ರಶಸ್ತಿಗೆ ಹತ್ತಿರವಾಗಿದೆ. ಆಂಧ್ರಪ್ರದೇಶ ವಿರುದ್ಧದ ಸೆಮಿಫೈನಲ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಸೌರಾಷ್ಟ್ರ 59 ರನ್‌ಗಳಿಂದ ಜಯ ಸಾಧಿಸಿತ್ತು. ಅರ್ಪಿತ್ ವಸವಾಡ(58) ಹಾಗೂ ರವೀಂದ್ರ ಜಡೇಜ(56)113 ರನ್ ಜೊತೆಯಾಟ ನಡೆಸಿ ಸೌರಾಷ್ಟ್ರ 255 ರನ್ ಗಳಿಸಲು ನೆರವಾಗಿದ್ದರು. ಧರ್ಮೇಂದ್ರ ಸಿನ್ಹಾ(4-40) ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ಆಂಧ್ರ 196 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಸೌರಾಷ್ಟ್ರದ ಪರ ಅರ್ಪಿತ್(273) ಹಾಗೂ ಪ್ರೇರಕ್ ಮಂಕಡ್(202) ಸ್ಥಿರ ಪ್ರದರ್ಶನ ನೀಡಿದ್ದಾರೆ. ಸೌರಾಷ್ಟ್ರದ ಯುವ ಬೌಲರ್ ಧರ್ಮೇಂದ್ರ ಟೂರ್ನಿಯಲ್ಲಿ ಒಟ್ಟು 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶೌರ್ಯ ಶಾಂಡಿಲ್ಯ(13) ಹಾಗೂ ಆಲ್‌ರೌಂಡರ್ ಚಿರಾಗ್ ಜಾನಿ(10) ಕೈಚಳಕ ತೋರಿಸಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ರವೀಂದ್ರ ಜಡೇಜ ಹಾಗೂ ರಾಬಿನ್ ಉತ್ತಪ್ಪ ಟೂರ್ನಿಯಲ್ಲಿ ಕೆಲವೇ ಪಂದ್ಯ ಆಡಿದ್ದಾರೆ. ಈ ಇಬ್ಬರು ಆಟಗಾರರು ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಸೌರಾಷ್ಟ್ರ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಸಾಧ್ಯತೆಯಿದೆ.
ಕರ್ನಾಟಕ
►ಕರುಣ್ ನಾಯರ್(ನಾಯಕ), ಮಾಯಾಂಕ್ ಅಗರವಾಲ್, ಆರ್.ಸಮರ್ಥ್, ಅನಿರುದ್ಧ ಜೋಶಿ, ರಿತೇಶ್ ಭಟ್ಕಳ್, ಸಿ.ಎಂ. ಗೌತಮ್(ವಿಕೆಟ್‌ಕೀಪರ್), ಎಸ್.ಗೋಪಾಲ್, ಕೆ.ಗೌತಮ್, ಪ್ರದೀಪ್, ಪವನ್ ದೇಶಪಾಂಡೆ, ಪ್ರಸಿದ್ಧ ಕೃಷ್ಣ, ಪ್ರವೀನ್ ದುಬೆ, ಜಗದೀಶ್ ಸುಚಿತ್, ಸ್ಟುವರ್ಟ್ ಬಿನ್ನಿ, ಎಸ್.ಅರವಿಂದ್, ರೋನಿತ್ ಮೋರೆ, ಶರತ್, ದೇವದೂತ್.
ಸೌರಾಷ್ಟ್ರ
►ಜೈದೇವ್ ಶಾ, ಅವಿ ಬರೊಟ್, ಅರ್ಪಿತ್ ವಸವಾಡ, ಹಿಮಾಲಯ ಬರಾಡ್, ಶೆಲ್ಡನ್ ಜಾಕ್ಸನ್, ಧರ್ಮಸಿನ್ಹಾ ಜಡೇಜ, ರವೀಂದ್ರ ಜಡೇಜ, ಚಿರಾಗ್ ಜಾನಿ, ಕಮಲೇಶ್ ಮಕ್ವಾನ, ಪ್ರೇರಕ್ ಮಂಕಡ್, ಚೇತೇಶ್ವರ ಪೂಜಾರ(ನಾಯಕ), ಹಾರ್ದಿಕ್ ರಾಥೋಡ್, ಶೌರ್ಯ, ರಾಬಿನ್ ಉತ್ತಪ್ಪ, ಸಮರ್ಥ್ ವ್ಯಾಸ್.
ಪಂದ್ಯದ ಸಮಯ: ಬೆಳಗ್ಗೆ 9:00 ಗಂಟೆಗೆ







