ರಾಜ್ಯದಲ್ಲಿರುವುದು ಸಿದ್ದರಾಮಯ್ಯ ಸರ್ಕಾರವಲ್ಲ, ಸೀದಾ ರೂಪಾಯಿ ಸರ್ಕಾರ: ಪ್ರಧಾನಿ ಮೋದಿ

ದಾವಣಗೆರೆ,ಫೆ.27: ರಾಜ್ಯದಲ್ಲಿರುವುದು ಸಿದ್ದರಾಮಯ್ಯ ಸರ್ಕಾರವಲ್ಲ, ಸೀದಾ ರೂಪಾಯಿ ಸರ್ಕಾರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿಕಾರಿದರು.
ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಮಂಗಳವಾರ ಬಿ.ಎಸ್. ಯಡಿಯೂರಪ್ಪ ಅವರ 75ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ರೈತ ಬಂಧು ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವ್ಯವಸ್ಥೆ ಕೆಟ್ಟು ಹೋಗಿದೆ. ಪ್ರತಿ ಯೋಜನೆಯಲ್ಲೂ 10 ಪರ್ಸೆಂಟ್ ಕಮಿಷನ್ ಪಡೆಯುವ ಸರ್ಕಾರ ಇದಾಗಿದೆ. ಇಂತಹ ಸಂಸ್ಕೃತಿ ಇರುವ ಭ್ರಷ್ಟ ಸರ್ಕಾರ ನಿಮಗೆ ಬೇಕೆ? ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಅವರು, ಒಂದು ನಿಮಿಷವೂ ಆಡಳಿತ ನಡೆಸಲು ಯೋಗ್ಯವಲ್ಲದ ಕಾಂಗ್ರೆಸ್ ಸರ್ಕಾರವನ್ನು ಕರ್ನಾಟಕದಿಂದ ತೊಲಗಿಸಿ, ಜನಸೇವೆ ಮಾಡುವ ಸರ್ಕಾರ ಆಡಳಿತಕ್ಕೆ ತರಲು ರೈತರು ಸೇರಿದಂತೆ ರಾಜ್ಯದ ಜನರು ಪಣತೊಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಎಲ್ಲಾ ಮಂತ್ರಿಗಳು ಸೀದಾ ರೂಪಾಯಿ ಸಂಸ್ಕೃತಿ ಹೊಂದಿದ್ದಾರೆ. ಸಚಿವರ ಮನೆಗಳ ಮೇಲೆ ಐಟಿ ದಾಳಿಯಾದ ಉದಾಹರಣೆ ದೇಶದಲ್ಲೇ ಇಲ್ಲ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮಂತ್ರಿಗಳ ಮನೆ ಮೇಲೆ ಐಟಿ ದಾಳಿಯಾಗಿದೆ. ಆ ಮಂತ್ರಿಗಳ ಮನೆಯಲ್ಲಿ ಸಾಕಷ್ಟು ನೋಟುಗಳು ಸಿಕ್ಕಿವೆ. ಇದೆಲ್ಲ ಎಲ್ಲಿಂದ ಬಂತು ಎಂದು ಎಲ್ಲರೂ ಯೋಚಿಸಿ. ಈ ಹಣ ಸೀದಾ ರೂಪಾಯಿಯಿಂದ ಬಂದಿವೆ ಎಂದು ಅವರು ಆರೋಪಿಸಿದರು.
ದೇಶದ ಅನೇಕ ರಾಜ್ಯಗಳಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆದಿದ್ದಾರೆ. ಕಾಂಗ್ರೆಸ್‍ನಿಂದ ಎಂದಿಗೂ ಅಭಿವೃದ್ಧಿ ಸಾಧ್ಯವಿಲ್ಲವೆಂದು ದೇಶದ ಜನತೆಗೆ ಗೊತ್ತಾಗಿದೆ. ಕರ್ನಾಟಕದಲ್ಲೂ ಸಹ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕಿತ್ತೆಸೆಯಲು ಜನರು ಉತ್ಸುಕರಾಗಿದ್ದಾರೆ. ಈ ಸರ್ಕಾರದ ಬಗ್ಗೆ ಜನರಿಗೆ ಆಕ್ರೋಶ, ಅಸೂಯೆ ಮೂಡಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ರೈತರಿಗಾಗಿ ಕೇಂದ್ರದ ಯೋಜನೆಗಳು:
ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ ತಕ್ಷಣವೇ 11 ಸಾವಿರ ಕೋಟಿ ಮೊತ್ತದ ಬಹುದೊಡ್ಡ ಯೋಜನೆ ರೂಪಿಸಿದೆ. ಮಣ್ಣು ಆರೋಗ್ಯ ಕಾರ್ಡ್, ಆದಾಯ ದುಪ್ಪಟ್ಟು ಮಾಡುವ ಕಾರ್ಯಕ್ರಮ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗಳು ಜಾರಿಗೆ ಬಂದವು. ಬೆಳೆ ನಷ್ಟವಾದರೆ, ರೋಗ ತಗುಲಿದರೆ ಈ ಯೋಜನೆಗಳು ನೆರವಾಗಲಿವೆ. ದೇವರ ಕರುಣೆಯಿಂದ ರೈತರು ಬದುಕುತ್ತಿದ್ದಾರೆ. ಒಂದು ವೇಳೆ ಪ್ರಾಕೃತಿಕ ವಿಪತ್ತು ಬಂದಾಗ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಈ ಯೋಜನೆಯಿಂದ ಸಿಗಲಿದೆ ಎಂದರು.
ಮುಷ್ಟಿ ಅಕ್ಕಿ ಅಭಿಯಾನ:
ರೈತರ ಆಶೀರ್ವಾದ ಪಡೆಯುವ ಸೌಭಾಗ್ಯ ನನಗೆ ಸಿಕ್ಕಿರುವುದು ಸಂತೋಷ ತಂದಿದೆ. ಜೊತೆಗೆ ಬಿಎಸ್‍ವೈ ಅವರು ತಮ್ಮ ಜನ್ಮದಿನದ ಅಂಗವಾಗಿ ಮುಷ್ಟಿ ಅಕ್ಕಿ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ರೈತರ ಭಾವನೆಗಳು, ತನು, ಮನ ಜೋಡಣೆಯಾಗಿದೆ. ಈ ಅಭಿಯಾನ ನವಕರ್ನಾಟಕ ನಿರ್ಮಾಣಕ್ಕೆ ನಾಂದಿಯಾಗಲಿದೆ. ನಮ್ಮ ಕಾರ್ಯಕರ್ತರು ಪ್ರತಿ ಗ್ರಾ.ಪಂ ಗೆ ತೆರಳಿ ಅಲ್ಲಿನ ರೈತರಲ್ಲಿ ಜಾಗೃತಿ ಮೂಡಿಸಿ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳದಂತೆ ಅವರಿಂದ ಪ್ರತಿಜ್ಞೆ ಮಾಡಿಕೊಳ್ಳುವ ಜೊತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬುತ್ತಾರೆ. ಇದರಿಂದ ರೈತರ ಜೀವನ ಬದಲಾವಣೆ ಆಗಲಿದೆ ಎಂದರು.
ಒಬ್ಬ ಚಾಯ್‍ವಾಲಾ ಅಧಿಕಾರಕ್ಕೆ ಬಂದ 4 ವರ್ಷದಲ್ಲೇ ರೈತರಿಗಾಗಿ ಅನೇಕ ಯೋಜನೆ ಜಾರಿಗೆ ತಂದ. ಆದರೆ, ಒಂದು ಕುಟುಂಬ 48 ವರ್ಷ ಆಡಳಿತ ನಡೆಸಿದರೂ ರೈತರ ಬಗ್ಗೆ ಕಾಳಜಿ ತೋರಲಿಲ್ಲ. ಆದ್ದರಿಂದ ರೈತರೇ ಯಾರು ನಮ್ಮವರು ಎಂದು ನಿರ್ಧರಿಸಬೇಕು ಎಂದರು.
ಜಗತ್ತಿನಲ್ಲೆ ಎತ್ತರದ ವಲ್ಲಭಾಯಿ ಪುತ್ಥಳಿ: ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ನಿರ್ಮಿಸಲು ಉದ್ದೇಶಿಸಿದ್ದೆವು. ಈ ಮೂರ್ತಿ ನಿರ್ಮಾಣಕ್ಕೆ ರೈತರಿಂದ ಕಬ್ಬಿಣದ ತುಂಡು ಕೇಳಿದ್ದೆವು. ಕೃಷಿಗೆ ಬಳಸಿದ ಸಲಕರಣೆಗಳ ಕಬ್ಬಿಣದ ತುಂಡನ್ನು ರೈತರು ದೇಶದ ಮೂಲೆಮೂಲೆಯಿಂದ ತಂದುಕೊಟ್ಟರು. ಆ ಕಬ್ಬಿಣದಿಂದಲೇ ಜಗತ್ತಿನ ಎತ್ತರದ ಸರ್ದಾರ್ ವಲ್ಲಬಾಯಿ ಪಟೇಲ್ ಮೂರ್ತಿ ಇಂದು ನಿರ್ಮಾಣವಾಗುತ್ತಿದೆ. ಅಮೇರಿಕಾದ ಲಿಬರ್ಟಿ ಪುತ್ಥಳಿಗಿಂತ ಹೆಚ್ಚು ಎತ್ತರದ ಪುತ್ಥಳಿ ಇದಾಗಲಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಿಗಿ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ವಿಧಾನಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಸಂಸದರಾದ ಶ್ರೀರಾಮುಲು, ಜಿ.ಎಂ. ಸಿದ್ದೇಶ್ವರ್, ಪ್ರಹ್ಲಾದ್ ಜೋಷಿ, ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಸಚಿವರಾದ ಎಂಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಕರುಣಾಕರರೆಡ್ಡಿ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರಪ್ಪ, ಬಸವರಾಜ ನಾಯ್ಕ, ರೈತ ಮುಖಂಡ ಶಂಕರಗೌಡ ಪಾಟೀಲ್ ಮತ್ತಿತರರಿದ್ದರು.
ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ:
ಕಾರ್ಯಕ್ರಮದ ಆರಂಭದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಕಾಯಕಯೋಗಿ ಬಸವಣ್ಣ, ಕವಿ ಕನಕದಾಸ, ಮಾದರ ಚೆನ್ನಯ್ಯ ಸ್ವಾಮಿ, ಓನಕೆ ಓಬವ್ವ, ಶಾಂತವೇರಿ ಗೋಪಾಲಗೌಡ್ರು ಸ್ಮರಿಸುವ ಮೂಲಕ ಜನರ ಚಪ್ಪಾಳೆ, ಸಿಳ್ಳೆಗೆ ಪಾತ್ರರಾದರು.







