ಲಾರಿ-ಕಾರು ಢಿಕ್ಕಿ: ಓರ್ವ ಮೃತ್ಯು; ಮಗು ಸಹಿತ ಐವರಿಗೆ ಗಾಯ
ಮೆಲ್ಕಾರ್ ಬಳಿ ಅಪಘಾತ
.jpg)
ಬಂಟ್ವಾಳ, ಫೆ. 27: ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿಯಾಗಿ ಢಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟಿದ್ದು, ಮಗು ಸಹಿತ ಐವರಿಗೆ ಗಾಯವಾದ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೆಲ್ಕಾರ್ ಬಳಿ ಮಂಗಳವಾರ ಸಂಭವಿಸಿದೆ.
ಅಪಘಾತದಲ್ಲಿ ಪಡುಬಿದ್ರೆ ನಿವಾಸಿಯಾದ ನಾಗಭೂಷಣ್ (48) ಎಂಬವರು ಮೃತಪಟ್ಟಿದ್ದು, ಕಾರು ಚಾಲಕ ಜಗದೀಶ ರಾಮಸ್ವಾಮಿ (44), ಮುಲ್ಕಿಯ ನಿವಾಸಿಗಳಾದ ಮಂಜುಶ್ರೀ (27) ಹಾಗೂ ಅವರ ಮಗು ಮನನ್ (2), ಕೃಷ್ಣರಾಜ ಭಟ್ (45), ಸುಬ್ರಹ್ಮಣ್ಯ (55) ಎಂಬವರು ಗಾಯಗೊಂಡವರು ಎಂದು ತಿಳಿದುಬಂದಿದೆ.
ಘಟನೆ: ರಾಮಕುಂಜದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾಮಹೋತ್ಸಕ್ಕೆ ಮಂಗಳವಾರ ಈ ಕುಟುಂಬ ತೆರಳಿದ್ದು, ಮಧ್ಯಾಹ್ನದ ಸುಮಾರಿಗೆ ಅಲ್ಲಿಂದ ವಾಪಸ್ ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭ ಬಿ.ಸಿ.ರೋಡ್ ಮಾರ್ಗವಾಗಿ ಹೋಗುತ್ತಿದ್ದ ಲಾರಿಯು ನಿಯಂತ್ರಣ ತಪ್ಪಿ ಮೆಲ್ಕಾರ್ ಬಳಿ ಕಾರಿಗೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಗಾಯಗೊಂಡವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ನಾಗಭೂಷಣ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಇಲ್ಲಿನ ವೈದ್ಯರು ತಿಳಿಸಿದ್ದಾರೆ.
ಉಳಿದ ಗಾಯಾಳುಗಳು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ಸಂದರ್ಭ ಕಾರ್ಯನಿಮಿತ್ತ ಪುತ್ತೂರು ಕಡೆಯಿಂದ ಬರುತ್ತಿದ್ದ ಡಿವೈಎಸ್ಪಿ ಶ್ರೀನಿವಾಸ್ ಅವರು ಅಪಘಾತ ಸ್ಥಳಕ್ಕೆ ಧಾವಿಸಿ, ಸ್ಥಳೀಯ ಸಹಕಾರದೊಂದಿಗೆ
ಗಾಯಾಳುಗಳನ್ನು ಆಸ್ಪತ್ರೆ ಸಾಗಿಸುವಲ್ಲಿ ಸಹಕರಿಸಿದರು. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟೆ ನೀಡಿ, ಪರಿಶೀಲನೆ ನಡೆಸಿದ್ದು, ನಂತರ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಈ ಸಂಬಂಧ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.







