ಶಾಖಾದ್ರಿ ನೇತೃತ್ವದಲ್ಲಿ ಬಾಬಾ ಬುಡನ್‍ಗಿರಿ ಉರೂಸ್ ಆಚರಣೆಗೆ ಮನವಿ: ಅವಕಾಶ ನೀಡದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

ಚಿಕ್ಕಮಗಳೂರು ಫೆ.27: ಶಾಖಾದ್ರಿ ನೇತೃತ್ವದಲ್ಲಿಯೇ ಬಾಬಾ ಬುಡನ್‍ಗಿರಿಯಲ್ಲಿ ಉರೂಸ್ ಆಚರಣೆಗೆ ಉಚ್ಚ ನ್ಯಾಯಾಲಯದ ಆದೇಶವಿದ್ದು, ನ್ಯಾಯಾಲಯದ ಆದೇಶದಂತೆ ಶಾಖಾದ್ರಿ ನೇತೃತ್ವದಲ್ಲಿ ಉರೂಸ್ ಆಚರಣೆಗೆ ಜಿಲ್ಲಾಡಳಿತ ಅನುವು ಮಾಡಿಕೊಡಬೇಕು. ತಪ್ಪಿದಲ್ಲಿ ಬಾಬಾಬುಡನ್‍ಗಿರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹಝ್ರತ್ ದಾದಾ ಹಯಾತ್ ಮೀರ್ ಕಮಿಟಿಯ ಜಿಲ್ಲಾಧ್ಯಕ್ಷ ಸಿರಾಜ್ ಹುಸೈನ್ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.
ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.2-4 ರವರೆಗೆ ಬಾಬಾ ಬುಡನ್‍ಗಿರಿಯಲ್ಲಿ ಉರೂಸ್ ಅಂಗವಾಗಿ ಸಂದಲ್ ಹಾಗೂ ಜನ್ನತ್ ಕಾರ್ಯಕ್ರಮವನ್ನು ಜಿಲ್ಲಾಡಳಿತ ನಡೆಸಲು ಸಿದ್ಧತೆ ನಡೆಸಿದೆ. ಆದರೆ ಜಿಲ್ಲಾಡಳಿತ ಉರೂಸ್ ಅನ್ನು ಶಾಖಾದ್ರಿ ನೇತೃತ್ವದಲ್ಲಿಯೇ ನಡೆಸಲು ಅವಕಾಶ ನೀಡಬೇಕು ಹಾಗೂ ಉರೂಸ್ ವೇಳೆ ಗುಹೆಯ ಆವರಣದಲ್ಲಿರುವ ದರ್ಗಾಕ್ಕೆ ಗಂಧ ಲೇಪನ, ಹಸಿರು ಹೊದಿಕೆ ಹೊದಿಸಲು ಅವಕಾಶ ನೀಡಬೇಕು. ಜೊತೆಗೆ ಬಾಬಾಬುಡನ್‍ಗಿರಿ ದರ್ಗಾಕ್ಕೆ ಮುಜಾವರ್ ರನ್ನು ಕೂಡಲೇ ನೇಮಿಸಲು ಮುಂದಾಗಬೇಕೆಂದು ಅವರು ಒತ್ತಾಯಿಸಿದರು.
ಬಾಬಾ ಬುಡನ್‍ಗಿರಿ ವಿವಾದ ಇತ್ಯರ್ಥ ಆಗುವವರೆಗೂ 1947ರ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ 1989ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅಂದಿನ ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತವೇ ಉರೂಸ್ ನಡೆಸುತ್ತದೆ ಎಂದು ಹೇಳಿಕೆ ನೀಡಿದ್ದರು. ಆದರೆ ಗಿರಿಯ ಅಂದಿನ ಶಾಖಾದ್ರಿ ಸೈಯದ್ ಫೀರ್ ಮುಹಮ್ಮದ್ ಅವರು ಎಲ್ಲ ಫಕೀರರ ಸಭೆ ನಡೆಸಿ 1989ರಲ್ಲಿ ಉರೂಸ್ ವೇಳೆ ಗುಹೆಯ ಒಳ ಪ್ರವೇಶಿಸಿ ಗೋರಿಗಳಿಗೆ ಗಂಧ, ಹಸಿರು ಬಟ್ಟೆ ಹಾಕಿ ವಿಧಿ ವಿಧಾನಗಳನ್ನು ಪೂರೈಸಿದ್ದರು. ಈ ಪದ್ಧತಿ 1945ರಿಂದ 1999ರವರೆಗೆ ನಡೆದುಕೊಂಡು ಬಂದಿದೆ. ಆದರೆ ಶಾಖಾದ್ರಿ ನಿಧನದ ಬಳಿಕ ಅವರ ಮಗ ಸೈಯದ್ ಗೌಸ್ ಮೊಹಿದ್ದೀನ್ ಖಾದ್ರಿ ಅವರು ಈ ಪದ್ಧತಿಯನ್ನು 2000-2005ರವರೆಗೆ ಮುಂದುವರಿಸಿಕೊಂಡು ಬಂದಿದ್ದಾರೆ. ಆ ಬಳಿಕ ಜಿಲ್ಲಾಡಳಿತ ಕೆಲ ಕಾರಣಗಳನ್ನು ಮುಂದಿಟ್ಟುಕೊಂಡು ಉರೂಸ್ ಸ್ಥಗಿತಗೊಳಿಸಿತ್ತು. ಇದರ ವಿರುದ್ಧ ಸೈಯದ್ ಗೌಸ್ ಮೊಹಿದ್ದೀನ್ ಶಾಖಾದ್ರಿ ನ್ಯಾಯಾಲಯದ ಮೊರೆ ಹೋಗಿದ್ದು, ಸುಪ್ರೀಂಕೋರ್ಟ್ 2011 ಮತ್ತು 2015ರಲ್ಲಿ ಈ ಸಂಬಂಧ ನೀಡಿದ ಆದೇಶದಲ್ಲಿ 1989ರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಿಳಿಸಿದೆ.
ಆದರೆ ಜಿಲ್ಲಾಡಳಿತವು, 'ನ್ಯಾಯಾಲಯದ ಆದೇಶದಲ್ಲಿ ಶಾಖಾದ್ರಿಯವರನ್ನು ಗುಹೆಯ ಒಳಗೆ ಬಿಡಬೇಕೆಂದು ಹೇಳಿಲ್ಲ' ಎಂದು ಹೇಳಿಕೆ ನೀಡಿ, ಸಾಂಪ್ರದಾಯಿಕ ಉರೂಸ್ ಆಚರಣೆಗೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ ಈ ಬಾರಿಯಾದರೂ ಜಿಲ್ಲಾಡಳಿತ ಬಾಬಾ ಬುಡನ್‍ಗಿರಿಗೆ ಮುಜಾವರ್ ರನ್ನು ನೇಮಕ ಮಾಡಿ, ಶಾಖಾದ್ರಿಯವರ ನೇತೃತ್ವದಲ್ಲಿಯೇ ಉರೂಸ್ ಆಚರಣೆಗೆ ಅವಕಾಶ ಕಲ್ಪಿಸಬೇಕು. ತಪ್ಪಿದಲ್ಲಿ ಪ್ರತಿಭಟನೆ ಅನಿವಾರ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಮುಬಾರಕ್, ಕಾರ್ಯದರ್ಶಿ ಔರಂಗ್ ಪಾಶ ಹಾಗೂ ಸಮಿತಿ ಸದಸ್ಯ ಇಮ್ರಾನ್ ಖಾನ್ ಉಪಸ್ಥಿತಿತರಿದ್ದರು.







