ಅಕ್ಟೋಬರ್‌ನಲ್ಲಿ ಮಕ್ಕಳ ಚಿತ್ರ ಸಂತೆ: ಪ್ರಶಾಂತ್ ಬಿ.ಪಿ.

ಉಡುಪಿ, ಫೆ.27: ಮಕ್ಕಳಿಗೆ ಚಿತ್ರಕಲೆಯಲ್ಲಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳು ಬಿಡಿಸಿದ ಚಿತ್ರಗಳನ್ನು ಒಟ್ಟು ಸೇರಿಸಿ ಮಕ್ಕಳ ಚಿತ್ರ ಸಂತೆ ಎಂಬ ಕಲಾಪ್ರದರ್ಶನವನ್ನು ಅಕ್ಟೋಬರ್ ತಿಂಗಳಲ್ಲಿ ನಡೆ ಸಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಬಿ.ಪಿ. ತಿಳಿಸಿದ್ದಾರೆ.
ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಉಡುಪಿ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಕಲಾವಿದ ಸಿದ್ದೇಶ್ ಬಿ.ಜೆ. ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹುಟ್ಟಿದ ಮಗು ಅಕ್ಷರ ಕಲಿಯುವ ಮೊದಲೇ ಚಿತ್ರ ಬಿಡಿಸುವುದನ್ನು ತಿಳಿದು ಕೊಳ್ಳುತ್ತದೆ. ಚಿತ್ರಕಲೆಗೆ ಅದರದ್ದೆ ಆದ ವೌಲ್ಯಗಳಿವೆ. ಅದನ್ನು ಉಳಿಸಿ ಬೆಳೆಸ ಬೇಕಾದರೆ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಎಸೆಸೆಲ್ಸಿಯವರೆಗೆ ಚಿತ್ರಕಲೆಯಲ್ಲಿ ಆಸಕ್ತಿ ತೋರುವ ಮಕ್ಕಳು ಉನ್ನತ ಶಿಕ್ಷಣದ ಸಂದರ್ಭ ಅದನ್ನು ಮರೆತುಬಿಡು ತ್ತಾರೆ. ಇಂದು ವೈದ್ಯರು ತಮ್ಮ ಒತ್ತಡ ನಿವಾರಣೆಗಾಗಿ ಚಿತ್ರಕಲೆಯ ಮೊರೆ ಹೋಗುತ್ತಿದ್ದಾರೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಚಿತ್ರಕಲಾ ಮಂದಿರದ ನಿರ್ದೇಶಕ ಡಾ. ಯು.ನಿರಂಜನ್, ಪ್ರಾಂಶುಪಾಲ ರಾಜೇಂದ್ರ ತ್ರಾಸಿ, ಅಕಾಡೆಮಿ ಸದಸ್ಯ ರಾಘ ವೇಂದ್ರ ಕೆ.ಅಮೀನ್, ಅಂಬಲಪಾಡಿ ರೋಟರಿ ಕಾರ್ಯದರ್ಶಿ ಶ್ರೀಶ ಆಚಾರ್, ಕಲಾವಿದ ಸಿದ್ದೇಶ್ ಬಿ.ಜೆ. ಉಪಸ್ಥಿತರಿದ್ದರು.
ತ್ರಿವರ್ಣ್ ಸ್ವಾಗತಿಸಿ, ವಂದಿಸಿದರು. ಮಾ.1ರವರೆಗೆ ನಡೆಯುವ ಈ ಕಲಾ ಪ್ರದರ್ಶನವು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯ ಇರುತ್ತದೆ.







