ರಾಜ್ಯದ ಆರೂವರೆ ಕೋಟಿ ಜನರ ಕಲ್ಯಾಣಾಭಿವೃದ್ಧಿಯೇ ನಮ್ಮ ಪಕ್ಷದ ಗುರಿ: ಯಡಿಯೂರಪ್ಪ
ದಾವಣಗೆರೆಯಲ್ಲಿ ರಾಜ್ಯರೈತ ಸಮಾವೇಶ
.jpg)
ದಾವಣಗೆರೆ,ಫೆ.27: ರಾಜ್ಯದ ಆರೂವರೆ ಕೋಟಿ ಜನರ ಕಲ್ಯಾಣಾಭಿವೃದ್ಧಿಯೇ ನಮ್ಮ ಪಕ್ಷದ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯರೈತ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಜ್ಯದ ಜನರು ನನಗೆ ಎಲ್ಲವನ್ನೂ ನೀಡಿದ್ದಾರೆ. ಅವರು ಋಣ ತೀರಿಸಲು ಹಾಗೂ ಸ್ವಚ, ಪಾರದರ್ಶಕ ಆಡಳಿತ ನಡೆಸಲು, ಜನತೆ ನೆಮ್ಮದಿಯಿಂದ ಬದುಕುವಂತೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ಅದಕ್ಕಾಗಿ, ಜನರು ಬಿಜೆಪಿಗೆ ಆಶೀರ್ವಾದ ಮಾಡಬೇಕೆಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ 3700ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೇ ನೇರ ಹೊಣೆ. ನಾವು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದಲ್ಲಿ ಮಹದಾಯಿ ಸಮಸ್ಯೆ ಪರಿಹರಿಸುತ್ತೇವೆ. ಕಾವೇರಿ ವಿವಾದ ಈಗ ಬಗೆಹರಿದಿದೆ. 1 ಲಕ್ಷ ಕೋಟಿ ಅನುದಾನವನ್ನು ನೀರಾವರಿ ಯೋಜನೆಗೆ ತೆಗೆದಿರಿಸುತ್ತೇವೆ. ಕೆರೆಕಟ್ಟೆ ತುಂಬಿಸಿ ರೈತರು ನೆಮ್ಮದಿಯಿಂದ ಬದುಕುವಂತೆ ಮಾಡುತ್ತೇವೆ ಎಂದರು.
ಆಲಮಟ್ಟಿ ಆಣೆಕಟ್ಟನ್ನು 524 ಮೀಟರ್ ಗೆ ಹೆಚ್ಚಿಸುತ್ತೇನೆ. ರಾಜ್ಯದ ಜ್ವಲಂತ ಸಮಸ್ಯೆ ಪರಿಹರಿಸುತ್ತೇನೆ. ಕಬ್ಬಿನ ಬಾಕಿ ಇನ್ನೂ ನೀಡಿಲ್ಲ. ಇಂತಹ ಹಲವು ಸಮಸ್ಯೆಗಳು ರಾಜ್ಯದಲ್ಲಿ ಇನ್ನೂ ಜೀವಂತವಿದ್ದು, ಈ ಎಲ್ಲಾ ಸಮಸ್ಯೆ ಪರಿಹರಿಸಿ ಕಲ್ಯಾಣ ರಾಜ್ಯ ಮಾಡಲು ರಾಜ್ಯದ ಜನತೆ ಅವಕಾಶ ಮಾಡಿಕೊಡಿ ಎಂದು ಅವರು ಮನವಿ ಮಾಡಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಗೂಂಡಾ ಸರ್ಕಾರವಿದೆ. ಈ ಗೂಂಡಾ ರಾಜ್ಯ ತೊಲಗಿಸಲು ಪ್ರತಿ ಮನೆಮನೆಗೆ ತೆರಳಿ ಕಾರ್ಯಕರ್ತರು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಬೇಕು. ಜಾತಿ ಸಮೀಕ್ಷೆ ಹೆಸರಿನಲ್ಲಿ ಹಿಂದುಳಿದವರು, ದಲಿತರಿಗೆ ಸಿಎಂ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂಸದ ಶ್ರೀರಾಮುಲು ಮಾತನಾಡಿ, ಬಿಎಸ್‍ವೈ ಒಬ್ಬ ವ್ಯಕ್ತಿಯಲ್ಲ. ಅವರೊಬ್ಬ ಶಕ್ತಿ. ಇವರು ಬಡವರ ದನಿ. ರೈತರ ನಾಯಕ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದರು.
ಶಾಸಕ ಸಿ.ಟಿ. ರವಿ ಮಾತನಾಡಿ, ಪಾಪದ ಕೊಡ ತುಂಬಿರುವ ದುಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಿ, ಬಿಜೆಪಿಗೆ ಅವಕಾಶ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದರು. ಸಂಸದ ಜಿ.ಎಂ. ಸಿದ್ದೇಶ್ವರ, ಅರವಿಂದ ಲಿಂಬಾವಳಿ, ರೈತನಾಯಕ ಶಂಕರಗೌಡ ಪಾಟೀಲ ಮಾತನಾಡಿದರು.







