ಸಿರಿಯ ರಕ್ತಪಾತ ನಿಲ್ಲಿಸಲು ಪ್ರಭಾವ ಬಳಸಿ: ರಶ್ಯಕ್ಕೆ ಅಮೆರಿಕ ಒತ್ತಾಯ

ವಾಶಿಂಗ್ಟನ್, ಫೆ. 27: ಸಿರಿಯದ ಬಂಡುಕೋರ ನಿಯಂತ್ರಣದಲ್ಲಿರುವ ಪೂರ್ವ ಘೌಟದಲ್ಲಿ ನಡೆಯುತ್ತಿರುವ ರಕ್ತಪಾತಕ್ಕೆ ತಕ್ಷಣ ಸಂಪೂರ್ಣ ವಿರಾಮ ಹಾಕಲು ತನ್ನ ‘ಪ್ರಭಾವ’ ಬಳಸುವಂತೆ ರಶ್ಯವನ್ನು ಅಮೆರಿಕ ಒತ್ತಾಯಿಸಿದೆ.
‘‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಯುದ್ಧವಿರಾಮಕ್ಕೆ ಕರೆ ನೀಡಿರುವ ಹೊರತಾಗಿಯೂ, ಡಮಾಸ್ಕಸ್‌ನ ಜನಭರಿತ ಉಪನಗರ ಪೂರ್ವ ಘೌಟದ ಮೇಲೆ ಸಿರಿಯ ಸರಕಾರ ಮತ್ತು ಅದರ ಬೆಂಬಲಿಗ ದೇಶಗಳಾದ ಇರಾನ್ ಮತ್ತು ರಶ್ಯಗಳು ನಿರಂತರವಾಗಿ ದಾಳಿ ಮಾಡುತ್ತಲೇ ಇವೆ’’ ಎಂದು ವಿದೇಶಾಂಗ ಇಲಾಖೆ ವಕ್ತಾರೆ ಹೆದರ್ ನೋವರ್ಟ್ ಸೋಮವಾರ ಟ್ವೀಟ್ ಮಾಡಿದ್ದಾರೆ.
‘‘ತಾನು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಸಿರಿಯ ಸರಕಾರ ಹೇಳುತ್ತಿದೆ. ಆದರೆ, ವಾಸ್ತವಿಕವಾಗಿ ಸರಕಾರವು ವಾಯು ದಾಳಿ, ಫಿರಂಗಿಗಳು, ರಾಕೆಟ್ ದಾಳಿ ಮತ್ತು ಭೂ ದಾಳಿಗಳ ಮೂಲಕ ಲಕ್ಷಾಂತರ ನಾಗರಿಕರನ್ನು ಭಯಭೀತಗೊಳಿಸುತ್ತಿದೆ. ಸರಕಾರಿ ಪಡೆಗಳು ಕ್ಲೋರಿನ್ ಅನಿಲ ಬಳಕೆ ಮೂಲಕ ನಾಗರಿಕರ ಯಾತನೆಯನ್ನು ಭಯಾನಕಗೊಳಿಸಿದೆ’’ ಎಂದು ಅವರು ಹೇಳಿದ್ದಾರೆ.
‘‘ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಯುದ್ಧವಿರಾಮದಡಿ ಬರುವ ತನ್ನ ಬದ್ಧತೆಯನ್ನು ಈಡೇರಿಸಲು ರಶ್ಯ ಬಯಸುವುದಾದರೆ, ಸಿರಿಯ ಸೇನೆಯ ಕಾರ್ಯಾಚರಣೆಯನ್ನು ನಿಲ್ಲಿಸಲು ಅದು ತನ್ನ ಪ್ರಭಾವ ಬಳಸಬೇಕು’’ ಎಂದರು.
ಸಿರಿಯದಲ್ಲಿ 30 ದಿನಗಳ ಯುದ್ಧವಿರಾಮ ಜಾರಿಗೆ ತರುವ ನಿರ್ಣಯವನ್ನು ಭದ್ರತಾ ಮಂಡಳಿ ಶನಿವಾರ ಅಂಗೀಕರಿಸಿರುವುದನ್ನು ಸ್ಮರಿಸಬಹುದಾಗಿದೆ.







