ಉಡುಪಿ: ಚುನಾವಣಾ ಲಾಂಛನ ಬಿಡುಗಡೆ

ಉಡುಪಿ, ಫೆ.27: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆ ಲಾಂಛನವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಮಂಗಳವಾರ ಮಣಿಪಾಲದ ತಮ್ಮ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ವಿಧಾನಸಭಾ ಚುನಾವಣಾ ಲಾಂಛನವನ್ನು ಬಿಡುಗಡೆ ಮಾಡಿ ಅವರು ಮಾತನಾಡುತಿದ್ದರು. ಜಿಲ್ಲೆಯ ವ್ಯಾಪ್ತಿಗೊಳಪಡುವ 118-ಬೈಂದೂರು, 119-ಕುಂದಾಪುರ, 120-ಉಡುಪಿ, 121-ಕಾಪು ಹಾಗೂ 122-ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಟಿಯನ್ನು ಫೆ.28ರಂದು ಸಿಇಒ (www.ceokarnataka.kar.nic.in) ವೆಬ್‌ಸೈಟ್‌ನಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದಲ್ಲಿ ಪ್ರಕಟಿಸಲಾಗುತ್ತದೆ ಎಂದರು.
ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ 1350 ಮತ್ತು 1620 ಬ್ಯಾಲೆಟ್ ಯೂನಿಟ್‌ಗಳನ್ನು ಸುರೇಂದ್ರನಗರ್ ಗುಜರಾತ್ ರಾಜ್ಯದಿಂದ ಪೂರೈಸಲಾಗಿದೆ ಹಾಗೂ ಚುನಾವಣೆಯಲ್ಲಿ ವಿವಿ ಪ್ಯಾಟ್ ಒಳಗೊಂಡ ಇವಿಎಂಗಳನ್ನು ಬಳಸಲಾಗುವುದರಿಂದ ಮತದಾನದ ಅವಧಿಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಒಂದು ಗಂಟೆ ವಿಸ್ತರಿಸಲಾಗುತ್ತಿದೆ ಎಂದರು.
ಉಡುಪಿ ಜಿಲ್ಲೆಯ ವ್ಯಾಪ್ತಿಗೊಳಪಡುವ ಬೈಂದೂರು, ಕುಂದಾಪುರ, ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 1078 ಮತಗಟ್ಟೆಗಳನ್ನು ಚಿಸಲಾಗಿದೆ ಎಂದವರು ವಿವರಿಸಿದರು.
ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಕಾಪಸಿ, ಚುನಾವಣಾ ಮೇಲ್ವಿಚಾರಕ ಸಂಪತ್‌ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತ ರಿದ್ದರು.







