‘ಚಿಕ್ಕಂದಿನಲ್ಲಿ ಬಂದ ವಲಸಿಗರ’ ವಿಷಯದಲ್ಲಿ ಮಧ್ಯಪ್ರವೇಶ ನಿರಾಕರಿಸಿದ ಸುಪ್ರೀಂ ಕೋರ್ಟ್

ವಾಶಿಂಗ್ಟನ್, ಫೆ. 27: ಚಿಕ್ಕಂದಿನಲ್ಲಿ ಅಮೆರಿಕಕ್ಕೆ ಬಂದು ನೆಲೆ ಕಂಡುಕೊಂಡಿರುವ ವಿದೇಶಿಯರನ್ನು ಗಡಿಪಾರಿನಿಂದ ರಕ್ಷಿಸುವ ಒಬಾಮ ಆಡಳಿತದ ಕಾನೂನನ್ನು ರದ್ದುಪಡಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಯತ್ನಗಳಿಗೆ ತಡೆಯುಂಟಾಗಿದೆ.
ಈ ಕಾನೂನನ್ನು ರದ್ದುಗೊಳಿಸುವುದನ್ನು ತಡೆಯುವ ಕೆಳ ನ್ಯಾಯಾಲಯಗಳ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಟ್ರಂಪ್ ಆಡಳಿತ ಸಲ್ಲಿಸಿರುವ ಮೇಲ್ಮನವಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಒಬಾಮ ಆಡಳಿತವು 2012ರಲ್ಲಿ ಈ ವಲಸಿಗರ ಗಡಿಪಾರನ್ನು ತಡೆಯುವ ಕಾನೂನನ್ನು ಜಾರಿಗೊಳಿಸಿತ್ತು. ಕಳೆದ ವರ್ಷ ಅಧಿಕಾರಕ್ಕೆ ಬಂದ ಟ್ರಂಪ್, ಮಾರ್ಚ್ 5ರಂದು 2012ರ ಕಾನೂನನ್ನು ಅಸಿಂಧುಗೊಳಿಸಿ ಆದೇಶವೊಂದನ್ನು ಹೊರಡಿಸಿರುವುದನ್ನು ಸ್ಮರಿಸಬಹುದಾಗಿದೆ.
ಟ್ರಂಪ್‌ರ ಈ ಆದೇಶದ ಹಿನ್ನೆಲೆಯಲ್ಲಿ 8,000 ಭಾರತೀಯರು ಸೇರಿದಂತೆ ಸುಮಾರು 7 ಲಕ್ಷ ಅಕ್ರಮ ವಲಸಿಗರು ತೊಂದರೆಗೆ ಸಿಲುಕಿಕೊಂಡಿದ್ದಾರೆ.
ಟ್ರಂಪ್‌ರ ಆದೇಶದ ಹೆಚ್ಚಿನ ಭಾಗಗಳ ಜಾರಿ ವಿರುದ್ಧ ಕ್ಯಾಲಿಫೋರ್ನಿಯ ಮತ್ತು ನ್ಯೂಯಾರ್ಕ್ ರಾಜ್ಯಗಳ ಫೆಡರಲ್ ನ್ಯಾಯಾಲಯಗಳು ರಾಷ್ಟ್ರವ್ಯಾಪಿ ತಡೆಯೊಡ್ಡಿವೆ. ಈ ತಡೆಯಾಜ್ಞೆಗಳ ವಿರುದ್ಧ ಸರಕಾರ ಮೇಲ್ಮನವಿಗಳನ್ನು ಸಲ್ಲಿಸಿದೆ. ಅವುಗಳು ಇನ್ನೂ ವಿಚಾರಣೆ ಹಂತಗಳಲ್ಲಿವೆ.
ಅದೇ ವೇಳೆ, ಮೇಲ್ಮನವಿ ನ್ಯಾಯಾಲಯಗಳ ತೀರ್ಪಿಗೆ ಕಾಯದೆ ಸರಕಾರವು ಸುಪ್ರೀಂ ಕೋರ್ಟ್‌ನಲ್ಲೂ ಕೆಳ ನ್ಯಾಯಾಲಯಗಳ ತೀರ್ಪನ್ನು ಪ್ರಶ್ನಿಸಿತ್ತು.
ಸುಪ್ರೀಂ ಕೋರ್ಟ್ ತನ್ನ ಕಿರು ಆದೇಶದಲ್ಲಿ, ಸರಕಾರದ ಮೇಲ್ಮನವಿಯನ್ನು ‘ಯಾವುದೇ ಪೂರ್ವಾಗ್ರಹವಿಲ್ಲದೆ ತಿರಸ್ಕರಿಸಲಾಗಿದೆ’ ಎಂದು ಹೇಳಿದೆ. ಅಂದರೆ, ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಳ್ಳಬಹುದಾಗಿದೆ.
‘‘ಈ ಪ್ರಕರಣದಲ್ಲಿ ಮೇಲ್ಮನವಿ ನ್ಯಾಯಾಲಯಗಳು ಕ್ಷಿಪ್ರ ನಿರ್ಧಾರಕ್ಕೆ ಬರಲಿವೆ’’ ಎಂದು ಸುಪ್ರೀಂ ಕೋರ್ಟ್ ಹೇಳಿತು.







