ಏರೋಸ್ಪೇಸ್ ಪಾರ್ಕ್-ಕಾಮನ್ ಫಿನಿಷಿಂಗ್ ಫೆಸಿಲಿಟಿ ಕೇಂದ್ರ ಸ್ಥಾಪನೆ: ಆರ್.ವಿ.ದೇಶಪಾಂಡೆ

ಬೆಂಗಳೂರು, ಫೆ.27: ರಾಜ್ಯ ಮತ್ತು ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಐದು ಎಕರೆ ಪ್ರದೇಶದಲ್ಲಿ ಏರೋಸ್ಪೇಸ್ ಕಾಮನ್ ಫಿನಿಷಿಂಗ್ ಫೆಸಿಲಿಟಿ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಮಂಗಳವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್(ಐಟಿ ಸೆಕ್ಟರ್) ಹಾಗೂ ಏರೋಸ್ಪೇಸ್ ಕಾಮನ್ ಫಿನಿಷಿಂಗ್ ಫೆಸಿಲಿಟಿ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪವಿರುವ ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ನಗರ ಜಿಲ್ಲೆಗಳ ಸುಮಾರು 2990 ಎಕರೆ ಭೂಮಿಯನ್ನು ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು.
ಕಳೆದ ದಶಕದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಏರೋಸ್ಪೇಸ್ ವಿಭಾಗವನ್ನು ಗಮನದಲ್ಲಿಟ್ಟುಕೊಂಡು ಈ ಹೆಜ್ಜೆ ಇಡಲಾಗಿದೆ. ಇದರಿಂದ ಏರೋಸ್ಪೇಸ್ ಕಾಮನ್ ಫಿನಿಷಿಂಗ್ ಫೆಸಿಲಿಟಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವಿಶೇಷ ವ್ಯವಸ್ಥೆಯಿಂದ ವಿಮಾನಯಾನದ ನಿರ್ಮಾಣಕ್ಕೆ ಬೇಕಾಗಿರುವ ಲೋಹ, ಎಲೆಕ್ಟ್ರಿಕಲ್ ವಸ್ತುಗಳ ಪ್ರಯೋಗಾಲಯವನ್ನು ಇಲ್ಲಿ ಸ್ಥಾಪಿಸಬಹುದು. ಅಲ್ಲದೆ, ಉತ್ಪನ್ನಗಳ ಪರೀಕ್ಷೆಯೂ ಮಾಡಬಹುದಾಗಿದೆ ಎಂದು ದೇಶಪಾಂಡೆ ತಿಳಿಸಿದರು.
ಈ ಕೇಂದ್ರ ಸ್ಥಾಪನೆಗೆ ಸಚಿವ ಸಂಪುಟದ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಇಂದು ಗುದ್ದಲಿಪೂಜೆ ನೆರವೇರಿದ್ದು, ಸದ್ಯದಲ್ಲೆ ಕಾಮಗಾರಿ ಆರಂಭಗೊಳ್ಳಲಿದೆ. ಒಟ್ಟು 90.50 ಕೋಟಿ ರೂ.ಅನುದಾನದಲ್ಲಿ ಕೇಂದ್ರ ಸರಕಾರ 42.69 ಕೋಟಿ ರೂ.ಹಾಗೂ ರಾಜ್ಯ ಸರಕಾರ 47.81 ಕೋಟಿ ರೂ.ಅನುದಾನ ನೀಡಿದೆ ಎಂದು ಅವರು ಹೇಳಿದರು.
ಇದರಿಂದ ಸಣ್ಣ, ಮಧ್ಯಮ ಹಾಗೂ ಭಾರಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದಂತಾಗುವುದು. ಈ ಯೋಜನೆ ಜಾರಿಗೆ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತದೆ. ಬಂಡವಾಳ ಹೂಡಿಕೆದಾರರಿಗೆ ಇಲ್ಲಿ ಒಳ್ಳೆಯ ಅವಕಾಶವಿದ್ದು, ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವಲ್ಲಿ ಸಹಕಾರಿಯಾಗಲಿದೆ. ಒಟ್ಟಿನಲ್ಲಿ ಕಾನೂನುಬದ್ಧ, ಪಾರದರ್ಶಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಇಲ್ಲಿನ 2990 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗುತ್ತಿರುವುದು ಕರ್ನಾಟಕದ ಮೈಲುಗಲ್ಲು. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆಗಳಿಗೆ ಒಳ್ಳೆಯ ಬೇಡಿಕೆಯಿದ್ದು, ಇದು ಏಳ್ಗೆಯ ಸಂಕೇತವೂ ಹೌದು ಎಂದರು.
ಈಗಾಗಲೇ 2ನೆ ಹಂತ ಮೆಟ್ರೋ ಗೊಟ್ಟಿಗೆರೆಯಿಂದ ಹೆಗಡೆ ನಗರದವರೆಗೆ ಅನುಮೋದನೆಗೊಂಡಿದೆ. 3ನೆ ಹಂತದ ಮೆಟ್ರೋ ಹೆಗಡೆನಗರದಿಂದ ಏರೋಸ್ಪೇಸ್ ಪಾರ್ಕ್‌ವರೆಗೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇನ್ನೂ ಅಂತಿಮಗೊಂಡಿಲ್ಲ. ಅದು ಪ್ರಗತಿಯಾದರೆ ಈ ಪ್ರದೇಶಗಳು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೆಐಎಡಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಜಯರಾಮ್, ಮುಖ್ಯ ಇಂಜಿನೀಯರ್ ಟಿ.ಆರ್.ಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.







