ಕೊಲೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು, ಫೆ. 27: ಸುರತ್ಕಲ್ ಸಮೀಪದ ಕುತ್ತೆತ್ತೂರು ಎಂಬಲ್ಲಿ 2015ರಲ್ಲಿ ನಡೆದಿದ್ದ ಉದ್ಯಮಿ ಕೇಶವ ಶೆಟ್ಟಿ ಕೊಲೆ ಪ್ರಕರಣದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ಕೇಶವ ಶೆಟ್ಟಿ ಕೊಲೆ ಪ್ರಕರಣದಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಇನ್ನೋರ್ವನಿಗೆ 6 ತಿಂಗಳು ಶಿಕ್ಷೆ ವಿಧಿಸಿದ್ದರೆ, ಮತ್ತೋರ್ವ ಬಾಲಾಪರಾಧಿಯಾಗಿದ್ದಾನೆ.
ಸತೀಶ ಯಾನೆ ಸಚ್ಚು(33), ನಿತೇಶ್(27) ಶೋಭರಾಜ್ ಯಾನೆ ಶೋಭಿ(27), ಯುವರಾಜ್ (27) ಜೀವಾವಧಿ ಶಿಕ್ಷೆಗೊಳಗಾದವರು.
ಉದ್ಯಮಿ ಕೇಶವ ಶೆಟ್ಟಿ ಮತ್ತು ತಂಡದ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ವೈಮನಸ್ಸು ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ಆರು ಮಂದಿಯ ಸಂಚು ರೂಪಿಸಿ 2015ರ ಜ. 6ರಂದು ಕುತ್ತೆತ್ತೂರಿನ ನಿರ್ಜನ ಪ್ರದೇಶದಲ್ಲಿ ಕೇಶವ ಶೆಟ್ಟಿಯವರನ್ನು ಮಾರಕಾಸ್ತ್ರದಿಂದ ಕಡಿದು ಕೊಲೆ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮೊದಲ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ 5ನೆ ವ್ಯಕ್ತಿಗೆ 6 ತಿಂಗಳು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇನ್ನೋರ್ವ ಬಾಲಾಪರಾಧಿಯಾಗಿರುವುದರಿಂದ ಬಾಲ ನ್ಯಾಯ ಮಂಡಳಿಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.







