ಸಿಬಿಎಸ್ಇ ಶಾಲೆಗಳಲ್ಲಿ ಪುಸ್ತಕ, ಸಮವಸ್ತ್ರ ಮಾರಲು ಅವಕಾಶ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಫೆ.27: ದೇಶದಾದ್ಯಂತ ಸಿಬಿಎಸ್ಇ ಶಾಲೆಗಳಲ್ಲಿ ಪುಸ್ತಕ, ಸಮವಸ್ತ್ರ ಮಾರುವುದನ್ನು ನಿಷೇಧಿಸಿರುವ ಸಿಬಿಎಸ್ಇ ಸುತ್ತೋಲೆಯನ್ನು ರದ್ದುಪಡಿಸಿರುವ ದಿಲ್ಲಿ ಹೈಕೋರ್ಟ್, ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾರಾಟ ಮಾಡಿದರೆ ಅದು ಶಿಕ್ಷಣದ ವ್ಯಾಪಾರೀಕರಣವಾಗದು ಎಂದು ಅಭಿಪ್ರಾಯಪಟ್ಟಿದೆ.
ಶಾಲಾ ಕಟ್ಟಡದಲ್ಲಿರುವ ಅಂಗಡಿಗಳಲ್ಲಿ ಎನ್ಸಿಆರ್ಟಿಗೆ ಹೊರತಾದ ಪುಸ್ತಕಗಳು, ಸ್ಟೇಷನರಿ ವಸ್ತುಗಳು ಅಥವಾ ಸಮವಸ್ತ್ರಗಳನ್ನು ಮಾರಾಟ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದಾದರೆ ಹೀಗೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ನ್ಯಾಯಮೂರ್ತಿ ರೇಖಾಪಳ್ಳಿ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ. ಶಾಲಾ ಆವರಣದಲ್ಲಿ ಪುಸ್ತಕ, ಸಮವಸ್ತ್ರ ಅಥವಾ ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡಬಾರದು ಹಾಗೂ ಈ ಅಂಗಡಿಗಳಿಂದಲೇ ಪುಸ್ತಕ, ಸಮವಸ್ತ್ರಗಳನ್ನು ಕೊಳ್ಳಬೇಕೆಂದು ಪೋಷಕರಿಗೆ ಬಲವಂತ ಪಡಿಸಬಾರದು ಎಂದು ಸಿಬಿಎಸ್ಇ 2017ರ ಎಪ್ರಿಲ್ನಲ್ಲಿ ಸುತ್ತೋಲೆ ಕಳಿಸಿತ್ತು. ಇದನ್ನು ಪ್ರಶ್ನಿಸಿ ಶಾಲಾ ಆವರಣದಲ್ಲಿ ವ್ಯಾಪಾರ ನಡೆಸುವವರ ಸಂಘಟನೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಶಾಲಾ ಆವರಣದಲ್ಲಿ ಪುಸ್ತಕ ಮಾರಾಟ ಮಾಡುವುದು ಶಿಕ್ಷಣದ ವಾಣಿಜ್ಯೀಕರಣ ಎಂದಾದರೆ, ಶಾಲಾ ಆವರಣದಲ್ಲಿ ಕ್ಯಾಂಟೀನ್ಗಳನ್ನು ಆರಂಭಿಸುವುದೂ ಶಿಕ್ಷಣದ ವಾಣಿಜ್ಯೀಕರಣವಲ್ಲವೇ ಎಂದು ಪ್ರಶ್ನಿಸಿ, ಸಿಬಿಎಸ್ಇ ಸುತ್ತೋಲೆಯನ್ನು ರದ್ದುಪಡಿಸಿದೆ.





