ದೇಶದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಉತ್ತರ ಕೊಡುವ ಎದೆಗಾರಿಕೆ ಮೋದಿಗೆ ಇಲ್ಲ: ಮೊಯ್ಲಿ

ಮೈಸೂರು,ಫೆ.27: ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಯೋಜನೆಗಳನ್ನು ಜಾರಿಗೊಳಿಸುಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರ ಸಂಪೂರ್ಣ ವಿಫಲಗೊಂಡಿದೆ. ಆಡಳಿತದ ವ್ಯವಸ್ಥೆ ಹದಗೆಟ್ಟಿದೆ. ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದೆ. ಇದಕ್ಕೆ ಉತ್ತರಕೊಡುವ ಎದೆಗಾರಿಕೆ ಮೋದಿ ಅವರಿಗಿಲ್ಲ. ಅಂಜುಬುರುಕು ತನವೋ ಏನೋ ಲೋಕಸಭಾ ಕಲಾಪಕ್ಕೆ ಬರುತ್ತಿಲ್ಲ ಎಂದು ಸಂಸದ ಎಂ.ವೀರಪ್ಪ ಮೊಯ್ಲಿ ಲೇವಡಿ ಮಾಡಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳವಾರ ಆಗಮಿಸಿದ ಅವರು, ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ನರೇಂದ್ರ ಮೋದಿ ಆಡಳಿತದ ವೈಖರಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪೂರ್ವ ಅನೇಕ ಭರವಸೆಗಳನ್ನು ಈ ದೇಶದ ಜನರಿಗೆ ನೀಡಿದ್ದರು. ಆದರೆ ಅದ್ಯಾವುದೂ ಕಾರ್ಯ ರೂಪಕ್ಕೆ ತರಲಿಲ್ಲ. ಅಧಿಕಾರಕ್ಕೆ ಬಂದ ನೂರು ದಿನಗಳೊಳಗೆ ಕಪ್ಪು ಹಣ ತಂದು ಬ್ಯಾಂಕ್ ಖಾತೆಗೆ 15 ಲಕ್ಷ ಜಮಾ ಮಾಡುವುದಾಗಿ ಹೇಳಿದ್ದರು. ಜಮಾ ಮಾಡುವುದಿರಲಿ ಜನರ ಜೇಬಿನಿಂದಲೇ ಹಣವನ್ನು ಕಸಿಯುವ ಕೆಲಸವನ್ನು ಮಾಡುತ್ತಿದ್ದಾರೆ. ರೈತರ ಆಧಾಯವನ್ನು ಎರಡು ಪಟ್ಟು ಹೆಚ್ಚಳ ಮಾಡುತ್ತೇನೆ ಎಂದಿದ್ದರು ಅದು ಆಗಲಿಲ್ಲ. ಮಹಿಳಾ ಕೈಗಾರಿಕಾ ಪಾರ್ಕ್ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಜೊತೆಗೆ ಯುನಿವರ್ಸಲ್ ಹೆಲ್ತ್ ಕವರೇಜ್ ಮಾಡಿಸುವುದಾಗಿ ನೀಡಿದ್ದ ಭರವಸೆ ಸಂಪೂರ್ಣ ವಿಫಲಗೊಂಡಿದೆ ಎಂದು ಕಿಡಿಕಾರಿದರು.
ದೇಶದ ರಕ್ಷಣಾ ವ್ಯವಸ್ಥೆಯನ್ನು ಅದಲು ಬದಲು ಮಾಡಿದ್ದಾರೆ. ಎಚ್‍ಎಎಲ್ ಉತ್ಪಾದನೆಯಲ್ಲಿ ಬದಲಾವಣೆ ತಂದಿದ್ದಾರೆ. ಇದರಿಂದ ಎರಡು ಪಟ್ಟುಕೊಟ್ಟು ಕೊಂಡುಕೊಳ್ಳುವ ವ್ಯವಸ್ಥೆ ನಿರ್ಮಾಣ ಮಾಡಿದ್ದಾರೆ. ಎಲ್ಲವನ್ನೂ ರಾಜಕೀಯ ಮಾಡಲು ಹೊರಟಿದ್ದಾರೆ. ಒಟ್ಟಾರೆ ದೇಶದ ರಾಜಕೀಯ ಭವಿಷ್ಯವನ್ನು ಒತ್ತೆ ಇಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ಅಲ್ಲಿನ ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿದರು. ಅದೇ ರೀತಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ನಿಷ್ಕ್ರಿಯ ಗೊಳಿಸಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹಾಗಾಗಿ ಸುಪ್ರೀಂ ಕೋರ್ಟ್‍ನ ನಾಲ್ಕು, ಐದು ನ್ಯಾಯಾದೀಶರನ್ನು ನೇಮಕ ಮಾಡದೆ ಮೀನಾ ಮೇಷ ಎಣಿಸುತ್ತಿದ್ದಾರೆ. ಜೊತೆಗೆ ದೇಶದ ಅನೇಕ ರಾಜ್ಯದಲ್ಲಿ ಖಾಲಿ ಇರುವ ಹೈಕೋರ್ಟ್‍ಗೆ ನ್ಯಾಯದೀಶರನ್ನು ನೇಮಿಸಿಲ್ಲ. ಇದಕ್ಕೆ ಉತ್ತರ ಕೊಡುವ ಎದೆಗಾರಿಕೆ ನರೇಂದ್ರ ಮೋದಿ ಅವರಿಗಿಲ್ಲ ಎಂದು ಹೇಳಿದರು.
ಕೋಟ್ಯಾಂತರ ರೂ. ಕೊಳ್ಳೆ ಹೊಡೆದ ನೀರವ್ ಮೋದಿ, ಲಲಿತ್ ಮೋದಿ ವಿರುದ್ಧ ಪ್ರಧಾನಿ ಮೋದಿ ಏಕೆ ಕ್ರಮ ಕೈಗೊಳ್ಳಲಿಲ್ಲ, ಅಮಿತ್ ಷಾ ಮಗ 85 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಇದರ ವಿರುದ್ಧ ಏಕೆ ಮಾತನಾಡುತ್ತಿಲ್ಲ ಎಂದು ಕೆಂಡ ಮಂಡಲರಾದ ಮೊಯ್ಲಿ, ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರದ ಸಚಿವರು ಮಾಡುತ್ತಿದ್ದಾರೆ ಎಂದು ದೂರಿದರು. ಬಿಇಎಂಲ್, ಎಚ್‍ಎಎಲ್ ಸಂಸ್ಥೆಗಳನ್ನು ಖಾಸಗಿಕರಣ ಮಾಡಲು ಹೊರಟಿದ್ದಾರೆ. ಇವರ ಭ್ರಷ್ಟಾಚಾರದ ಪ್ರಕರಣಗಳು ಇನ್ನೂ ಅನೇಕ ಇದೆ ಎಂದು ಆಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಹಾಗೂ ರಾಜ್ಯದ ಬಿಜೆಪಿ ಅಧ್ಯಕ್ಷರು ಸೇರಿದಂತೆ ಅನೇಕರು ಅಸಭ್ಯವಾದ ಆಪಾದನೆಗಳನ್ನು ನಮ್ಮ ಮೇಲೆ ಮಾಡುತ್ತಿದ್ದಾರೆ. ಇದಕ್ಕೆ ಉತ್ತರಕೊಡಲು ಚುನಾವಣೆ ಬರಬೇಕಿದೆ. ಕಾಂಗ್ರೆಸ್ ಪಕ್ಷ 150 ಸೀಟು ಗೆಲ್ಲುವ ಮೂಲಕ ರಾಜ್ಯದ ಜನತೆ ಇವರಿಗೆ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ರಾಷ್ಟ್ರದ ಜಿಡಿಪಿ 6.5 ರಷ್ಟಿದ್ದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜಿಡಿಪಿ 8.52 ರಷ್ಟಿದೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ತಿಳಿಯಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಆರ್ಥಿಕ ಸುಭದ್ರತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಉತ್ತಮ ಆಡಳಿತ ನೀಡಿದ ಸಿದ್ದು: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಐದು ವರ್ಷವನ್ನು ಪೂರ್ಣಗೊಳಿಸಿದ್ದು ಉತ್ತಮ ಆಡಳಿತ ನೀಡಿದೆ. ತಮ್ಮ ಆಡಳಿತಾವದಿಯಲ್ಲಿ ಒಂದೇ ಒಂದು ಭ್ರಷ್ಟಾಚಾರವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡಿಲ್ಲ, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಸಂಪೂರ್ಣ ಜಾರಿಗೊಳಿಸಲಾಗಿದ್ದು, ರಾಜ್ಯದ ಜನತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ವಾಸು, ಸೇರಿದಂತೆ ನಗರಪಾಲಿಕೆ ಸದಸ್ಯರು, ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಈಗಾಗಲೇ ಅಂತಿಮ ಹಂತ ತಲುಪಿದ್ದು, ಮಾರ್ಚ್ 10 ಅಥವಾ 15ನೇ ರೊಳಗೆ ಘೋಷಣೆ ಮಾಡುವುದಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಹಾಗು ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಟ್ಟಿಗೆ ಈಗಾಗಲೇ ಮಾತನಾಡಿದ್ದೇನೆ. ಮಾರ್ಚ್ 10 ಅಥವಾ 15 ರೊಳಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಘೋಷಣೆಯಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಅಲ್ಲಿನ ಆರ್ಥಿಕ ತಜ್ಞರು, ರೈತರು, ಸಾಮಾಜಿಕ ಕಳಕಳಿ ಹೊಂದಿರುವವರ ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದರು.
ನವ ಕರ್ನಾಟಕ ನಿರ್ಮಾಣ -2025ರ ಗುರಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸರಕಾರದ ವತಿಯಿಂದ ಎಲ್ಲಾ ಜಿಲ್ಲೆಗಳ ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ. ಎರಡೂ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಒಟ್ಟು ಮೂರು ಹಂತದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದು, ಬೆಂಗಳೂರಿನಲ್ಲಿ ಒಟ್ಟು ರಾಜ್ಯದ ಅಭಿವೃದ್ಧಿ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಲಿದ್ದಾರೆ. ಇನ್ನೂ ವಿಭಾಗ ಮಟ್ಟದಲ್ಲಿ ರಾಜ್ಯದ ನಾಯಕರುಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಅಲ್ಲಿನ ಪ್ರಮುಖರು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕರ್ನಲ್ ಕಾರ್ಯಪ್ಪ ಅವರ ಹೆಸರಿನಲ್ಲಿ ಕಾವೇರಿ ನೀರಿನ ಶುದ್ದೀಕರಣ, ತುಂಗಭದ್ರ ಶುದ್ದೀಕರಣ ಯೋಜನೆಗಳನ್ನು ಸೇರಿಸಲಾಗಿದೆ. ಕಾವೇರಿ, ಮಹಾದಾಯಿ ವಿಚಾರಕ್ಕೆ ಸಂಬಂಧ ಪಟ್ಟಂತೆ ನಮ್ಮ ಪ್ರಾಣಳಿಕೆಯಲ್ಲಿ ಘೋಷಣೆ ಮಾಡುವುದಾಗಿ ವೀರಪ್ಪ ಮೊಯಿಲಿ ತಾವು ಸಿದ್ಧ ಪಡಿಸಿರುವ ಪ್ರಣಾಳಿಕೆ ಬಗ್ಗೆ ವಿವರ ನೀಡಿದರು.







