ಶಾಸಕ ಮಂಕಾಳುಗೆ ಭದ್ರತೆ ಹೆಚ್ಚಿಸಲು ಕ್ರಮ: ಎಸ್ಪಿ ವಿನಾಯಕ ಪಾಟೀಲ್
ಕಾರವಾರ, ಫೆ.27: ಶಾಸಕ ಮಂಕಾಳು ವೈದ್ಯರಿದ್ದ ವೇದಿಕೆ ಕಾರ್ಯಕ್ರಮದ ಬಳಿ ಸೋಮವಾರ ಸ್ಫೋಟಕವಾದ ಸ್ಥಳದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಸುತ್ತಲಿನ ಗಿಡ-ಮರಗಳ ಮೇಲೆ ಬಿಳಿ ಬಣ್ಣದ ಪುಡಿಗಳು ಕಂಡು ಬಂದಿವೆ ಎಂದು ಎಸ್ಪಿ ವಿನಾಯಕ ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 80 ರಿಂದ 100 ಮೀಟರ್ ಅಂತರದಲ್ಲಿ ಈ ವಸ್ತು ಪತ್ತೆಯಾಗಿದ್ದು ಬಾಂಬ್ ನಿಷ್ಕ್ರೀಯ ದಳದವರು ವಸ್ತುವಿನ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.
ನ್ಯಾಯಾಲಯದ ಅನುಮತಿ ಪಡೆದ ನಂತರ ಬಾಂಬ್ ನಿಷ್ಕ್ರೀಯ ದಳದವರು ಪಂಚನಾಮೆ ನಡೆಸಿ ದೊರೆತಿರುವ ವಸ್ತುವಿನ ಕುರಿತು ಪೊಲೀಸ್ ಇಲಾಖೆಗೆ ವರದಿ ನೀಡಲಿದ್ದಾರೆ. ಈಗಾಗಲೇ ಬಾಂಬ್ ನಿಷ್ಕ್ರೀಯ ದಳ ಗಾಯಾಳುವಿನ ರಕ್ತದ ಮಾದರಿ, ಬಟ್ಟೆ ಹಾಗೂ ಸ್ಥಳದಲ್ಲಿ ಕೆಲ ಕುರುಹುಗಳನ್ನು ಸಂಗ್ರಹಿಸಿದ್ದಾರೆ.
ಆರೋಪಿತ ಗಾಯಾಳು ರೈಮಂಡ್ ಕೈತಾನ್‌ಗೆ ಪ್ರಜ್ಞೆ ಬಂದಿದ್ದು ವೈದ್ಯರ ಇನ್ನಷ್ಟು ಆರೈಕೆಯ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಯಾವದೇ ವಿಚಾರಣೆ ನಡೆಸಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೀಟರ್ ಎಂಬಾತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶಾಸಕ ಮಂಕಾಳು ವೈದ್ಯರಿಗೆ ಈಗಾಗಲೇ ಇಬ್ಬರು ಗನ್‌ಮ್ಯಾನ್ ಇದ್ದಾರೆ. ಭದ್ರತೆ ಇನ್ನಷ್ಟು ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದರು.





