ಮಡಿಕೇರಿ: ಸಕಾಲದಲ್ಲಿ ಆಹಾರ ಪೂರೈಕೆಯಾಗದಿದ್ದಲ್ಲಿ ಎಂಎಸ್‍ಪಿಟಿಸಿ ಟೆಂಡರ್ ರದ್ದು; ಡಿ.ಸಿ ಶ್ರೀವಿದ್ಯಾ
ಮಾತೃಪೂರ್ಣ ಅನುಷ್ಠಾನ ಸಮಿತಿ ಸಭೆ

ಮಡಿಕೇರಿ ಫೆ.27: ನಗರದ ಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮ ಮೇಲ್ವಿಚಾರಣೆ ಸಮಿತಿ ಹಾಗೂ ಮಾತೃಪೂರ್ಣ ಅನುಷ್ಠಾನ ಸಮಿತಿ ಸಭೆ ನಡೆಯಿತು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ, ಗುಣಮಟ್ಟದ ಪೂರಕ ಪೌಷ್ಠಿಕ ಆಹಾರ ಪದಾರ್ಥಗಳನ್ನು ನಿಗದಿತ ಸಮಯದಲ್ಲಿ ಎಂಎಸ್‍ಪಿಟಿಸಿ ಫಟಕಗಳು ಶಿಶು ಅಭಿವೃದ್ಧಿ ಯೋಜನೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಬೇಕು. ಇಲ್ಲವಾದರೆ ಅವುಗಳ ಟೆಂಡರ್ ಗಳನ್ನು ರದ್ದು ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 2 ಎಂಎಸ್‍ಪಿಟಿಸಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ ಅವರು ತಿಳಿಸಿದರು.
ಎಂಎಸ್‍ಪಿಟಿಸಿ ಘಟಕಗಳು ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಿರಬೇಕು ಎಂದು ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ನಿರ್ದೇಶನ ನೀಡಿದರು.
ಎಲ್ಲಾ ಅಂಗನವಾಡಿಗಳಲ್ಲಿ ಮೆನು ಚಾರ್ಟ್‍ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅಂಗನವಾಡಿಗಳಲ್ಲಿ ಸ್ಥಳಾವಕಾಶವಿದ್ದರೆ ತರಕಾರಿಗಳನ್ನು ಬೆಳೆಸಿ ಬಳಸಿಕೊಳ್ಳಬೇಕು. ಅಂಗನವಾಡಿಗೆ ಬರುವ ಮಕ್ಕಳಿಗೆ ಬಾಳೆಹಣ್ಣುಗಳನ್ನು ವಿತರಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಮಕ್ಕಳಿಗೆ ವಿತರಿಸುವ ನ್ಯೂಟ್ರಿಮಿಕ್ಸ್ ಆಹಾರ ಪದಾರ್ಥವು ಪೌಷ್ಠಿಕವಾಗಿರಬೇಕು ಹಾಗೂ ನ್ಯೂಟ್ರಿಮಿಕ್ಸ್ ಆಹಾರ ಪದಾರ್ಥವನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿ ಅವರು ಪ್ರಮಾಣೀಕರಿಸಿದ ವರದಿ ಬಂದ ನಂತರ ಮಕ್ಕಳಿಗೆ ವಿತರಿಸಬೇಕು ಮತ್ತು ನ್ಯೂಟ್ರಿಯುಕ್ತ ಆಹಾರ ಪದಾರ್ಥವನ್ನು ಸರಿಯಾದ ರೀತಿಯಲ್ಲಿ ಪ್ಯಾಕ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮಾತೃಪೂರ್ಣ ಯೋಜನೆಯು ಸಂಪೂರ್ಣವಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಅಸಮಾಧಾನ ವ್ಯಕ್ತಪಡಿಸಿದರು. ಮಾತೃಪೂರ್ಣ ಯೋಜನೆಯು ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ತಲುಪುವಂತೆ ಗಮನಹರಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಅವರು ಮಧ್ಯಪ್ರವೇಶಿಸಿ ಮಾತನಾಡಿ, ಗುಡ್ಡಗಾಡಿನ ಪ್ರದೇಶದ ಗರ್ಭಿಣಿಯರಿಗೆ ಅಂಗನವಾಡಿಗೆ ಬಂದು ಆಹಾರ ಸೇವನೆ ಮಾಡುವುದು ಕಷ್ಟವಾಗಿರುವುದರಿಂದ ಅವರ ಮನೆಗಳಿಗೆ ಮಾತೃಪೂರ್ಣ ಯೋಜನೆಯ ಸೌಲಭ್ಯ ತಲುಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಅವರು ಮಾತನಾಡಿ,ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಮಾಹಿತಿ ನೀಡುವುದು ಹಾಗೂ ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಆಶಾ ಕಾರ್ಯಕರ್ತರ ಹಾಗೂ ಅಂಗನವಾಡಿ ಕಾರ್ಯಕರ್ತರ ಕರ್ತವ್ಯವಾಗಿದೆ ಎಂದು ಹೇಳಿದರು.
ಸಭೆಗೆ, ಬಾಲಕಿಯರ ಬಾಲ ಭವನದ ಮೇಲ್ವಿಚಾರಕರಾದ ಮಮ್ತಾಜ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಇತರರು ಹಲವು ಮಾಹಿತಿ ನೀಡಿದರು.
ಸಭೆಯಲ್ಲಿ ತಾಲ್ಲೂಕು ತಾ.ಪಂ.ಇಒ ಜೀವನ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಎಂಎಸ್‍ಪಿಟಿಸಿ ಘಟಕಗಳ ಸದಸ್ಯರು ಇತರರು ಹಾಜರಿದ್ದರು.







