ಮಡಿಕೇರಿ: ಮಾನವೀಯ ದೃಷ್ಟಿಯಿಂದ ಮೂಲಭೂತ ಸೌಲಭ್ಯ ನೀಡಿ; ವೀಣಾಅಚ್ಚಯ್ಯ ಸೂಚನೆ

ಮಡಿಕೇರಿ ಫೆ.27: ದೇವರಪುರ ಹಾಡಿ ವಿವಾದದ ಅಂತಿಮ ಆದೇಶ ಬರುವವರೆಗಾದರೂ ಮಾನವೀಯ ದೃಷ್ಟಿಯಿಂದ ಅಲ್ಲಿನ ನಿವಾಸಿಗಳಿಗೆ ತಾತ್ಕಾಲಿಕವಾಗಿ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ಆ ಸ್ಥಳಕ್ಕೆ ಭೇಟಿ ನೀಡಿದ ಅವರು ಧರಣಿ ನಿರತರೊಂದಿಗೆ ಚರ್ಚೆ ನಡೆಸಿದರು.
ಕುಡಿಯುವ ನೀರಿನ ಸೌಲಭ್ಯ, ಸೋಲಾರ್ ದೀಪ, ಶೌಚಾಲಯ ಒದಗಿಸುವಲ್ಲಿ ಇಲಾಖೆಗಳು ಕ್ರಮ ವಹಿಸಬೇಕು. ರಾಜಕೀಯ ಭಾಷಣ ಮಾಡಲು ನಾನು ಬಂದಿಲ್ಲ. ರಾಜಕೀಯ ರಹಿತವಾಗಿ ಹಾಡಿ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು. ಈ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರ ಗಮನ ಸೆಳೆಯವುದಾಗಿ ಭರವಸೆ ನೀಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ದೇವರಪುರ ಪೈಸಾರಿ ಹಾಡಿಯಲ್ಲಿ 150 ಕುಟುಂಬಗಳು ಜೀವನ ನಡೆಸುತ್ತಿದ್ದು, ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಕಳೆದಿದ್ದರೂ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.ಮೂಲಭೂತ ಸೌಲಭ್ಯ ಕಲ್ಪಿಸಿದರೆ ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.
ಕಾಂಗ್ರೆಸ್ ಎಸ್‍ಸಿ ಘಟಕದ ಅಧ್ಯಕ್ಷರಾದ ಸತೀಶ್ ಕುಮಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನಾ, ವಿಶ್ವನಾಥ್, ಕೃಷ್ಣಪ್ಪ, ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಎಚ್.ಎಸ್. ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.







