ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್: ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು, ಫೆ.27: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಎಲ್‌ಇಡಿ ಬಲ್ಬ್‌ಗಳ ಅಳವಡಿಕೆಗೆ ಕರೆದಿರುವ ಜಾಗತಿಕ ಟೆಂಡರ್‌ಗೆ ತಡೆ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನಗರದಲ್ಲಿ 4,85,000 ಸಾಂಪ್ರದಾಯಕ ಬೀದಿ ದೀಪಗಳನ್ನು ತೆಗೆದು ಅವುಗಳ ಸ್ಥಾನಕ್ಕೆ ಎಲ್‌ಇಡಿ ಬಲ್ಬ್ ಅಳವಡಿಸಲು ಬಿಬಿಎಂಪಿ ಕರೆದಿದ್ದ ಗ್ಲೋಬಲ್ ಟೆಂಡರ್ ಪ್ರಶ್ನಿಸಿ ಪಾಲಿಕೆ ವಿದ್ಯುತ್ ಗುತ್ತಿಗೆದಾರರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಜಾಗೊಳಿಸಿತು.
ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಸಿದರೆ ವಿದ್ಯುತ್ ಬಳಕೆ ಮತ್ತು ವಿದ್ಯುತ್ ಖರೀದಿಗೆ ವಿನಿಯೋಗಿಸುತ್ತಿದ್ದ ವೆಚ್ಚ ಉಳಿತಾಯ ಮಾಡಬಹುದಾಗಿದೆ. ಇದು ಕೇಂದ್ರ ಸರಕಾರದ ನೀತಿಯಾಗಿದ್ದು, ಅದನ್ನು ಬಿಬಿಎಂಪಿ ಅಳವಡಿಸಿಕೊಂಡಿದೆ. ಈ ಯೋಜನೆಯಿಂದ ಸಾಕಷ್ಟು ಉಪಯೋಗವಾಗಲಿದೆ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ. ಇದರಿಂದ ಯೋಜನೆಗೆ ಹಸಿರು ನಿಶಾನೆ ದೊರೆತಿದೆ .
ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೂ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ನಗರದಲ್ಲಿನ 4,85,000 ಸಾಂಪ್ರದಾಯಕ ಬೀದಿ ದೀಪಗಳನ್ನು ತೆಗೆದು ಅವುಗಳ ಸ್ಥಾನಕ್ಕೆ ಎಲ್‌ಇಡಿ ಬಲ್ಬ್ ಅಳವಡಿಸಲು ಜಾಗತಿಕ ಟೆಂಡರ್ ಕರೆಯಲಾಗಿದೆ. ತಜ್ಞರ ಸಮಿತಿ ಶಿಫಾರಸು ಮೇರೆಗೆ ಈ ಕ್ರಮಕ್ಕೆ ನಿರ್ಧರಿಸಲಾಗಿದೆ.
ಹಾಲಿ ಸಾಂಪ್ರದಾಯಿಕ ಬೀದಿ ದೀಪಗಳು ಬೆಳಗಲು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಸಲಾಗುತ್ತಿದೆ. ಎಲ್‌ಇಡಿ ಬಲ್ಭ್ ಅಳವಡಿಸಿದರೆ ವಿದ್ಯುತ್ ಬಳಕೆ ಪ್ರಮಾಣ ಹಾಗೂ ನಿರ್ವಹಣೆಯ ವೆಚ್ಚ ಶೇ.60ರಿಂದ 70ರಷ್ಟು ಕಡಿಮೆಯಾಗಲಿದೆ. ಪರಿಣಾಮ ಬಿಬಿಎಂಪಿಗೆ ಪ್ರತಿ ತಿಂಗಳು 8.4 ಕೋಟಿ ರೂ. ಉಳಿತಾಯವಾಗಲಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತಿದ್ದು, ಯೋಜನೆಯ ಒಪ್ಪಂದ 10 ವರ್ಷ ಅವಧಿಯದ್ದಾಗಿರುತ್ತದೆ ಎಂದು ಬಿಬಿಎಂಪಿ ವಾದ ಮಂಡಿಸಿತ್ತು. ನ್ಯಾಯಪೀಠ ಈ ವಾದ ಪುರಸ್ಕರಿಸಿದೆ.







