ವೆಸ್ಟ್‌ಇಂಡೀಸ್ ತಂಡಕ್ಕೆ ಗೇಲ್ ವಾಪಸ್
ಬಾರ್ಬಡಾಸ್,ಫೆ.27: ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್ ಮುಂಬರುವ ಝಿಂಬಾಬ್ವೆಯಲ್ಲಿ ನಡೆಯಲಿರುವ 2019ರ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಲಭ್ಯ ವಿರುವುದಕ್ಕೆ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ-8 ರಿಂದ ಹೊರಗುಳಿಯುವ ಮೂಲಕ ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ನೇರ ಪ್ರವೇಶ ಗಿಟ್ಟಿಸಿಕೊಳ್ಳಲು ವಿಫಲವಾಗಿತ್ತು. ವಿಂಡೀಸ್ ವಿಶ್ವಕಪ್ ಅರ್ಹತೆ ಪಡೆಯ ಬೇಕಾದರೆ ದುರ್ಬಲ ತಂಡದೊಂದಿಗೆ ಅರ್ಹತಾ ಸುತ್ತಿನಲ್ಲಿ ಆಡಬೇಕಾಗಿದೆ. ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಉದ್ದೇಶದಿಂದ ಪ್ರಮುಖ ಆಟಗಾರರಾದ ಡರೆನ್ ಬ್ರಾವೊ, ಸುನೀಲ್ ನರೇನ್, ಆ್ಯಂಡ್ರೆ ರಸ್ಸಲ್ ಹಾಗೂ ಕಿರೊನ್ ಪೊಲಾರ್ಡ್ ವಿಶ್ವಕಪ್ ಅರ್ಹತಾ ಪಂದ್ಯದಿಂದ ಹೊರಗುಳಿದಿದ್ದರು. ಗೇಲ್ ಹಾಗೂ ಸ್ಯಾಮುಯೆಲ್ ಜೋಡಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಆಡಲು ನಿರ್ಧರಿಸಿರುವುದಕ್ಕೆ 26ರ ಹರೆಯದ ಹೋಲ್ಡರ್ ಸಂತೋಷ ವ್ಯಕ್ತಪಡಿಸಿದ್ದಾರೆ.
ವಿಂಡೀಸ್ ಮಾ.6 ರಂದು ಯುಎಇ ವಿರುದ್ಧ ಮೊದಲ ಗ್ರೂಪ್ ಪಂದ್ಯವನ್ನು ಆಡಲಿದೆ.





