ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ: ತಪ್ಪಿತಸ್ಥರ ಆಸ್ತಿ ಮುಟ್ಟುಗೋಲಿಗೆ ಶಿಫಾರಸ್ಸು
ಶೀಘ್ರದಲ್ಲೆ ರಾಜ್ಯ ಸರಕಾರಕ್ಕೆ ಸಲ್ಲಿಕೆ

ತಜ್ಞರ ಸಮಿತಿಯ 1500 ಪುಟಗಳ ವರದಿ ಸಿದ್ಧ
ಬೆಂಗಳೂರು, ಫೆ. 28: ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು, ಸರಕಾರಿ ಸೌಲಭ್ಯಗಳ ಸ್ಥಗಿತ ಮತ್ತು ಮತದಾನದ ಹಕ್ಕನ್ನು ಅಮಾನತ್ತುಗೊಳಿಸುವುದು ಸೇರಿದಂತೆ ಹಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಲಿದೆ ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ 1500 ಪುಟಗಳ ಅಂತಿಮ ವರದಿ ಸಿದ್ಧವಾಗಿದ್ದು ಶೀಘ್ರದಲ್ಲೆ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು. ಅತ್ಯಾಚಾರ ಪ್ರಕರಣಗಳ ತನಿಖೆ, ವಿಚಾರಣೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ, ನ್ಯಾಯದಾನದಲ್ಲಿನ ವಿಳಂಬ ತಪ್ಪಿಸಬೇಕು. ಪ್ರಕರಣದಲ್ಲಿನ ಸಂತ್ರಸ್ತರಿಗೆ ಪರಿಹಾರ ನೀಡುವುದರ ಜತೆಗೆ ಶಿಕ್ಷಣ, ಸರಕಾರಿ ಉದ್ಯೋಗ ಕಲ್ಪಿಸಬೇಕು. ಪ್ರಕರಣ ದಾಖಲಾದ 24 ಗಂಟೆಯೊಳಗೆ ಸಂತ್ರಸ್ತರ ಚಿಕಿತ್ಸೆಗೆ ಶೇ.25ರಷ್ಟು ಹಣ ನೀಡಬೇಕು. ಅಲ್ಲದೆ, ತನಿಖಾಧಿಕಾರಿ ಪರಿಹಾರದ ಅರ್ಜಿಗೆ ಸಹಿ ಪಡೆದು ಪರಿಹಾರದ ಮೊತ್ತವನ್ನು ಹಂತ-ಹಂತವಾಗಿ ವಿತರಣೆಗೆ ಕ್ರಮ ವಹಿಸಬೇಕು ಎಂಬುದು ಸೇರಿ ಹಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಲಿದೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಿರುವವರು ಶೋಷಿತ ವರ್ಗಗಳಿಗೆ ಸೇರಿದ ಹೆಣ್ಣು ಮಕ್ಕಳು ಎಂಬ ಅಂಶ ಸಮಿತಿಗೆ ಗೊತ್ತಾಗಿದೆ ಎಂದ ಅವರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ, ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜನ ಜಾಗೃತಿ, ಜನಾಂದೋಲನ ಅಗತ್ಯ ಎಂದರು.
ಪ್ರಕರಣ ದಾಖಲು-ಪರಿಹಾರ: ಸಮಿತಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ 130ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ. 198ಕ್ಕೂ ಹೆಚ್ಚು ವೈಯಕ್ತಿಕ ಪ್ರಕರಣಗಳನ್ನು ಅಧ್ಯಯನ ನಡೆಸಿದೆ ಎಂದರು.
ಅತ್ಯಾಚಾರ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದ ಪೊಲೀಸರು ಸಮಿತಿ ಸೂಚನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಆದರೆ, ತನಿಖೆ ಮತ್ತು ವಿಚಾರಣೆ ವಿಳಂಬ ಆಗುತ್ತಿದೆ. ಆದುದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲು ಸಮಿತಿ ಶಿಫಾರಸ್ಸು ಮಾಡಲಿದೆ ಎಂದು ಹೇಳಿದರು.
ಕೋರ್ಟ್‌ಗೆ ನಿರ್ದೇಶನ ನೀಡಲು ಅಸಾಧ್ಯ
‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ ಮೇಲಿನ ಆರೋಪದ ಪ್ರಕರಣ ಸಂತ್ರಸ್ತೆಗೆ ಪರಿಹಾರ ದೊರಕಿಸಿಕೊಡಲಾಗಿದೆ. ಅಲ್ಲದೆ, ಆಕೆಯ ಮೇಲೆ ದಾಖಲಿಸಿದ್ದ ಸುಳ್ಳು ಮೊಕದ್ದಮೆ ಹಿಂಪಡೆಯಲು ಸಮಿತಿ ಶ್ರಮಿಸಿದೆ. ಆದರೆ, ನ್ಯಾಯಾಲಯಕ್ಕೆ ನಿರ್ದೇಶನ ನೀಡಲು ಸಮಿತಿಗೆ ಸಾಧ್ಯವಿಲ್ಲ’
-ವಿ.ಎಸ್.ಉಗ್ರಪ್ಪ,ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ







