ಕಾಂಗ್ರೆಸ್ ಶಾಸಕ ಮಾಲಿಕಯ್ಯ ಗುತ್ತೆದಾರ್ ಜೆಡಿಎಸ್‌ಗೆ ?

ಕಲಬುರ್ಗಿ, ಫೆ.28: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಗರಿಗೆದರಿ ನಿಲ್ಲುತ್ತಾರೆ. ಆಯಾ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು, ಮಾಜಿ ಶಾಸಕರೇ ಜನತೆಯ ಕೇಂದ್ರ ಬಿಂದು ಆಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಶಾಸಕ ಸ್ಥಾನದ ಆಕಾಂಕ್ಷಿಗಳು ತಮಗೆ ಸೂಕ್ತ ಸ್ಥಾನಮಾನ ನೀಡುವ ಪಕ್ಷದಲ್ಲಿ ಗುರುತಿಸಿಕೊಳ್ಳಲು ಹಾತೊರೆಯುತ್ತಾರೆ.
ಈಗ ಕಲಬುರ್ಗಿ ಜಿಲ್ಲೆಯ ರಾಜಕೀಯ ನಾಯಕರ ವಿಷಯವನ್ನು ನೋಡುವುದಾದರೆ, ಇಲ್ಲಿನ ಅಫ್ಜಲ್‌ಪುರದ ಕಾಂಗ್ರೆಸ್ ಶಾಸಕ ಮಾಲಿಕಯ್ಯ ಗುತ್ತೇದಾರ್ ತರಾತುರಿಯಲ್ಲಿ ಜೆಡಿಎಸ್‌ಗೆ ಸೇರಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಜೆಡಿಎಸ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಬಹಿರಂಗವಾಗಿಯೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಕಲಬುರ್ಗಿಗೆ ಸ್ವಾಗತ ಕೋರಿ ಫ್ಲೆಕ್ಸ್ ಹಾಕಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಬ್ಬೇರಿಸುವಂತೆ ಮಾಡಿದೆ.
ಜೆಡಿಎಸ್ ಪಕ್ಷದ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಇಂದು ಎಚ್.ಡಿ.ದೇವೇಗೌಡ ಅಫ್ಜಲ್‌ಪುರ ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಾಗಿರುವ ಮಾಲಿಕಯ್ಯ ಗುತ್ತೇದಾರ್ ದೇವೇಗೌಡರ ಆಗಮನಕ್ಕೆ ಸ್ವಾಗತ ಕೋರಿ ಕಟೌಟ್ ಹಾಕಿರುವುದು ರಾಜಕೀಯ ವಲಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಾಲೀಕಯ್ಯ ಗುತ್ತೇದಾರ್ ಅಫ್ಜಲ್‌ಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿದ್ದಾರೆ. ಆದರೆ ತಮ್ಮ ಸ್ವಪಕ್ಷದವರಿಂದಲೇ ಸಚಿವನಾಗುವ ಯೋಗ ತಪ್ಪಿದೆ ಎಂದು ಹಲವು ಬಾರಿ ಬಹಿರಂಗವಾಗಿಯೇ ಗುತ್ತೇದಾರ್ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಪಕ್ಷ ಬಿಡಲಿದ್ದಾರೆಂಬ ಸುದ್ದಿ ಕೂಡ ಹರಿದಾಡುತ್ತಿತ್ತು. ನಂತರದ ದಿನಗಳಲ್ಲಿ ಎಲ್ಲವನ್ನು ತಳ್ಳಿ ಹಾಕಿದ ಗುತ್ತೇದಾರ್, ತಾವು ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಯುವುದಾಗಿ ಹೇಳಿದ್ದರು.
ಈಗ ವಿಧಾನಸಭಾ ಚುನಾವಣೆ ಎದುರಾಗಿರುವ ಸಮಯದಲ್ಲಿ ಹೈ-ಕರ್ನಾಟಕ ಭಾಗದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಹಿಗ್ಗಿಸಿಕೊಳ್ಳಲು ವಿಶೇಷ ಆಸಕ್ತಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ದೇವೇಗೌಡರ ಗಾಳಕ್ಕೆ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಸಿಕ್ಕಿದ್ದಾರೆ ಎಂದು ಕ್ಷೇತ್ರದ ಜನತೆಯ ಲೆಕ್ಕಾಚಾರವಾಗಿದೆ.
ಗುತ್ತೇದಾರ ಸ್ಪಷ್ಟನೆ: ಸ್ವಾಗತದ ಕಟೌಟ್ ಬಗ್ಗೆ ಶಾಸಕ ಮಾಲೀಕಯ್ಯ ಗುತ್ತೇದಾರ್ ಹೇಳಿಕೆಯೇ ಬೇರೆಯಿದೆ. ದೇವೇಗೌಡರು 22 ವರ್ಷಗಳ ನಂತರ ಅಫ್ಜಲಪುರ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ಅಫ್ಜಲ್‌ಪುರಕ್ಕೆ ಬಂದಿದ್ದರು. ಆಗ ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಭೀಮಾ ಏತ ನೀರಾವರಿ ಯೋಜನೆಗೆ 20 ಕೋಟಿ ರೂ. ನೀಡಿದ್ದರು. ಇದರಿಂದ ಸಾವಿರಾರು ರೈತರ ಜಮೀನಿಗೆ ನೀರು ಹರಿಯುತ್ತಿದೆ. ಅದಕ್ಕೆ ಕೃತಜ್ಞತೆ ಸಲ್ಲಿಸುವ ಹಿನ್ನೆಲೆ ಸ್ವಾಗತ ಕೋರಲಾಗಿದೆ. ಅನ್ಯಥಾ ಭಾವಿಸುವುದು, ರಾಜಕೀಯ ಬೆರೆಸುವುದು ಬೇಡವೆಂದು ಸ್ಪಷ್ಟನೆ ನೀಡಿದ್ದಾರೆ.
ಎಚ್.ಡಿ. ದೇವೇಗೌಡರಿಗೆ ಸ್ವಾಗತ ಕೋರಿ ಅಫ್ಜಲಪುರ ಶಾಸಕ ಮಾಲಿಕಯ್ಯ ಗುತ್ತೇದಾರ್ ಬ್ಯಾನರ್ ಹಾಕಿರುವ ಬಗ್ಗೆ ತನಗೇನೂ ಗೊತ್ತಿಲ್ಲ. ಫ್ಲೆಕ್ಸ್, ಬ್ಯಾನರ್‌ಗಳನ್ನು ಅವರು ಹಾಕಿಸಿದರೋ ಅಥವಾ ಬೇರೆಯವರು ಹಾಕಿಸಿದ್ದಾರೋ ಗೊತ್ತಿಲ್ಲ. ಹಿರಿಯ ನಾಯಕರಿಗೆ ಸ್ವಾಗತ ಕೋರುತ್ತಿದ್ದಾರೆಂದರೆ ಇಂಥ ಟೈಮ್‌ನಲ್ಲಿ ಜನ ಒಪ್ಪಬೇಕಲ್ಲ. ಈ ಬಗ್ಗೆ ನಮ್ಮ ಕೆಪಿಸಿಸಿ ಅಧ್ಯಕ್ಷರಿದ್ದಾರೆ. ಅವರು ನೋಡಿಕೊಳ್ಳುತ್ತಾರೆ.
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ







