ವೆಸ್ಟರ್ನ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವಂಚನೆ ಆರೋಪ: ಪೊಲೀಸ್ ಆಯುಕ್ತರಿಗೆ ಸಿಎಫ್‌ಐ ಮನವಿ

ಮಂಗಳೂರು, ಫೆ.28: ನಗರದ ಕದ್ರಿ ಹಿಲ್ಸ್ ಬಳಿಯ ವೆಸ್ಟರ್ನ್ ಶಿಕ್ಷಣ ಸಂಸ್ಥೆಯಲ್ಲಿ ಸಿವಿಲ್, ಮೆಕಾನಿಕಲ್, ಸೇಫ್ಟಿ ಮುಂತಾದ ಕೋರ್ಸ್‌ಗಳಿಗೆ 2016-17ರ ಅವಧಿಯಲ್ಲಿ ದಾಖಲಾಗಿರುವ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಂಚನೆಯಾಗಿದೆ ಎಂದು ಆರೋಪಿಸಿರುವ ಸಿಎಫ್‌ಐ, ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಪೊಲೀಸ್ ಆಯುಕ್ತರಿಗೆ ಬುಧವಾರ ಮನವಿ ಮಾಡಿದೆ.
ಕೋರ್ಸ್ ಮುಗಿದ ಬಳಿಕ ಉದ್ಯೋಗ ಖಾತರಿ, ತರಬೇತಿ ಮತ್ತು ಅಂತಾರಾಷ್ಟ್ರೀಯ ಮಾನ್ಯತೆ ಪಡೆದಂತಹ ನೆಬೋಶ್, ಅಯೋಶ್, ಫ್ರಾಂಕ್‌ಫಿನ್‌ನಂತಹ ಕೋರ್ಸ್‌ಗಳ ಸರ್ಟಿಫಿಕೇಟ್ ನೀಡುವುದಾಗಿ ಸಂಸ್ಥೆ ಭರವಸೆ ನೀಡಿತ್ತು. ಆದರೆ ವಿದ್ಯಾರ್ಥಿಗಳ ಕೋರ್ಸ್ ಮುಗಿದು ವರ್ಷಗಳು ಕಳೆದರೂ ಕೂಡ ಸಂಸ್ಥೆಯು ಭರವಸೆಯನ್ನು ಪೂರೈಸಲಿಲ್ಲ. ಈ ಹಿಂದೆಯೇ ಎಲ್ಲ ಕೋರ್ಸ್‌ಗಳಿಗೆ ವಿಶ್ವವಿದ್ಯಾನಿಲಯ ಮಾನ್ಯತೆ ಹೊಂದಿದ ಕೆಎಸ್‌ಒಯು ಸರ್ಟಿಫಿಕೇಟ್ ದೊರಬೇಕಾಗಿತ್ತು. ಯುಜಿಸಿ ಮತ್ತು ಕೆಎಸ್‌ಒ ಮಾನ್ಯತೆ ರದ್ದು ಮಾಡಿದ್ದರಿಂದ ವಿದ್ಯಾರ್ಥಿಗಳು ಅತಂತ್ರಗೊಂಡಿದ್ದರು. ಇದೀಗ ಕಾಲೇಜಿನ ಈ ನಡೆಯು ವಿದ್ಯಾರ್ಥಿಗಳನ್ನು ಇನ್ನಷ್ಟು ಸಂಕಷ್ಟಕ್ಕೀಡುಮಾಡಿದೆ. ಯಾವುದೇ ಕಂಪನೆಗಳಿಗೆ ಉದ್ಯೋಗಕ್ಕೆಂದು ಹೋದಾಗ ಕಂಪನಿಯು ಉದ್ಯೋಗಕ್ಕೆ ಬೇಕಾದಂತಹ ಪೂರಕ ದಾಖಲೆಗಳು ಕೇಳುವಾಗ ವಿದ್ಯಾರ್ಥಿಗಳು ನಿರಾಶರಾಗಿ ವಾಪಸ್ಸಾಗುತ್ತಿದ್ದಾರೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ನಿರ್ವಾಹಕರನ್ನು ಸಂಪರ್ಕಿಸಿದಾಗ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯ ಮೋಸದಾಟದಿಂದ ವಿದ್ಯಾರ್ಥಿಗಳು ಬೀದಿಪಾಲಾಗಿದ್ದಾರೆ ಎಂದು ಸಿಎಫ್‌ಐ ಆಪಾದಿಸಿದೆ.
ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸುವ ಸಂದರ್ಭ ವಿದ್ಯಾರ್ಥಿಗಳಾದ ಪ್ರಿಯಾ, ಶೌಕತ್, ತಮೀಮ್, ಮಣಿಕಂಠನ್, ಮನು ಮ್ಯಾಥ್ಯೂಸ್, ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಸಿಎಫ್‌ಐ ಆಗ್ರಹ : ವೆಸ್ಟರ್ನ್ ವಿದ್ಯಾಸಂಸ್ಥೆಯಲ್ಲಿ ನಡೆದ ವಂಚನೆಯನ್ನು ಸಿಎಫ್‌ಐ ಖಂಡಿಸಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಮಾರು 45,000 ರೂ. ಶುಲ್ಕವನ್ನು ಪಾವತಿಸಿ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಕಾಲೇಜಿಗೆ ಸೇರಿರುತ್ತಾರೆ. ಎಲ್ಲರು ಬಡ ವರ್ಗದಿಂದ ಬಂದಿರುವ ವಿದ್ಯಾರ್ಥಿಗಳಾಗಿದ್ದು ಇದೀಗ ಸಂಸ್ಥೆಯ ವಂಚನೆಯಿಂದ ಅಸಹಾಯಕರಾಗಿದ್ದಾರೆ. ಈ ಘಟನೆಯು ಶಿಕ್ಷಣ ಕ್ಷೇತ್ರದೊಳಗಿನ ಪಾರದರ್ಶಕತೆಯನ್ನು ಎತ್ತಿ ತೋರಿಸುತ್ತಿದೆ. ವಾರದೊಳಗೆ ವಿದ್ಯಾರ್ಥಿಗಳ ಬೇಡಿಕೆಯನ್ನು ಸಂಸ್ಥೆಯು ಈಡೇರಿಸದೇ ಇದ್ದರೆ ಸಿಎಫ್‌ಐ ವತಿಯಿಂದ ಕಾಲೇಜಿನ ಮುಂಭಾಗದಲ್ಲಿ ಧರಣಿ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.







