ಯಳಂದೂರು: ಶೌಚಗೃಹದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯ ಶವ

ಯಳಂದೂರು,ಫೆ.28: ತಾಲೂಕಿನ ಮಾಂಬಳ್ಳಿ ಗ್ರಾಮದ ಬಡಾವಣೆಯಲ್ಲಿರುವ ಇರ್ಫಾನ್ ಎಂಬುವರಿಗೆ ಸೇರಿದ ಮನೆಯ ಹಿಂಭಾಗದಲ್ಲಿರುವ ಶೌಚಗೃಹದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಕೊಳ್ಳೇಗಾಲ ತಾಲೂಕಿ ಬೆಂಡರಳ್ಳಿ ಗ್ರಾಮದ ನಿವಾಸಿ ಮಹೇಶ್ (46) ಮೃತಪಟ್ಟಿರುವ ವ್ಯಕ್ತಿಯಾಗಿದ್ದಾರೆ. ಇವರು ಇದೇ ಗ್ರಾಮದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆ ಕೆಲಸವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಗ್ರಾಮದ ಬೀದಿಯ ಅಕ್ಕಪಕ್ಕದಲ್ಲಿ ಕೆಟ್ಟ ವಾಸನೆ ಬೀರುತ್ತಿದ್ದು, ಇದನ್ನು ಗಮನಿಸಿದ ಸ್ಥಳಿಯ ನಿವಾಸಿಗಳು ತಕ್ಷಣ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಂದು ಪರಿಶೀಲಿಸಿದಾಗ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಂತರ ಶವ ದೊರೆತ ಶೌಚಾಗೃಹದ ಜಾಗ ಸುತ್ತಮುತ್ತ ಪರಿಶೀಲಿಸಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮೃತಪಟ್ಟಿರುವ ವ್ಯಕ್ತಿಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಡಿದ್ದು, ಈ ಬಗ್ಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಮೃತ ವ್ಯಕ್ತಿಯ ಸಂಬಂಧಿಕರಿಗೆ ಶವವನ್ನು ಹಸ್ತಾಂತರಿಸಲಾಗಿದೆ. ಈ ಸಂಬಂಧ ಅಗರ-ಮಾಂಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.







