ಉಡುಪಿ ನಗರಸಭೆ ಮೂರು ವಲಯಗಳಿಗೆ ದಿನಕ್ಕೆ ನಾಲ್ಕು ಗಂಟೆ ನೀರು ಸರಬರಾಜು

ಉಡುಪಿ, ಫೆ.28: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮೂರು ವಲಯ ಗಳನ್ನಾಗಿ ಮಾಡಿ ದಿನಕ್ಕೆ ಪ್ರತಿ ವಲಯಗಳಿಗೆ ನಾಲ್ಕು ಗಂಟೆಗಳ ಕಾಲ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾ.2ರಿಂದ ಅನುಷ್ಠಾನಕ್ಕೆ ತರಲಾಗು ವುದು ಎಂದು ನಗರಸಭೆ ಪರಿಸರ ಇಂಜಿನಿಯರ್ ರಾಘವೇಂದ್ರ ತಿಳಿಸಿದ್ದಾರೆ.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿ ದರು. ವಲಯ ಒಂದಕ್ಕೆ ಬೆಳಗ್ಗೆ 4:30ರಿಂದ 8:30ರವರೆಗೆ, ವಲಯ ಎರಡಕ್ಕೆ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ, ವಲಯ ಮೂರಕ್ಕೆ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಒತ್ತಡದಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದರು.
ಬಜೆಯಲ್ಲಿ ಕಳೆದ ವರ್ಷ ಈ ದಿನ 4.75ಮೀಟರ್ ನೀರಿನ ಸಂಗ್ರಹ ಇದ್ದರೆ ಪ್ರಸ್ತುತ 5.22ಮೀಟರ್ ಸಂಗ್ರಹ ಇದೆ. ಶಿರೂರಿನಲ್ಲಿ ಡ್ಯಾಮ್ ಮರಳಿನ ಚೀಲ ತೆಗೆದರೆ 0.5 ಹೆಚ್ಚು ನೀರು ಸಿಗಲಿದೆ. ಮಾರ್ಚ್ ತಿಂಗಳಲ್ಲಿ 5.08 ಮೀಟರ್ ನೀರಿನ ಸಂಗ್ರಹ ಇರುವ ಸಾಧ್ಯತೆಗಳಿದ್ದು, ಇದನ್ನು 90-95 ದಿನಗಳ ಕಾಲ ಬಳಕೆ ಮಾಡಬಹುದು. ಮುಂದೆ ಇನ್ನಷ್ಟು ನೀರಿನ ಅಭಾವ ತಲೆದೋರಿದರೆ ಎರಡು ದಿನಕ್ಕೊಮ್ಮೆ ನೀರು ನೀಡುವ ವ್ಯವಸ್ಥೆ ಮಾಡಲಾುವುದು ಎಂದು ಅವರು ತಿಳಿಸಿದರು.
ಠಾಣಾ ವ್ಯಾಪ್ತಿಯ ಗೊಂದಲ: ಅಮೃತಾ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, ಕಿನ್ನಿಮುಲ್ಕಿಯಲ್ಲಿ ಪೊಲೀಸ್ ಠಾಣಾ ಗಡಿ ವ್ಯಾಪ್ತಿಯ ಗೊಂದಲ ಗಳಿದ್ದು, ಒಂದೇ ಪ್ರದೇಶದಲ್ಲಿ ರುವ ಒಂದು ಮನೆ ಮಲ್ಪೆ ಠಾಣೆಗೆ ಮತ್ತೊಂದು ಉಡುಪಿ ನಗರ ಠಾಣೆಯ ವ್ಯಾಪ್ತಿಗೆ ಬರುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಇತರ ಸದಸ್ಯರು ಕೂಡ ಧ್ವನಿಗೂಡಿಸಿ, ಈ ಸಮಸ್ಯೆ ಎಲ್ಲ ವಾರ್ಡ್‌ಗಳಲ್ಲಿದ್ದು, ಠಾಣಾ ಗಡಿ ವ್ಯಾಪ್ತಿಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಎಸ್ಪಿಯವರಿಗೆ ಪತ್ರ ಬರೆಯಲಾಗುವುದು. ಕಂದಾಯ ಹಾಗೂ ಪೊಲೀಸ್ ಇಲಾಖೆಯ ಜಂಟಿಯಾಗಿ ಗಡಿ ಗುರುತಿಸುವ ಕೆಲಸ ಮಾಡಬೇಕು ಎಂದು ಪೌರಾಯುಕ್ತ ಡಿ.ಮಂಜುನಾಥಯ್ಯ ಹೇಳಿದರು.
ಮಣಿಪಾಲ ಇಂದಿರಾ ಕ್ಯಾಂಟಿನನ್ನು ಜನನಿಬಿಡ ಪ್ರದೇಶದ ಬದಲು ಜಿಲ್ಲಾ ಧಿಕಾರಿ ಕಚೇರಿಗೆ ತೆರಳುವ ರಸ್ತೆಯಲ್ಲಿ ನಿರ್ಮಿಸಿರುವುದು ಸರಿಯಲ್ಲ ಎಂದು ಸದಸ್ಯ ನರಸಿಂಹ ನಾಯಕ್ ತಿಳಿಸಿದರು. ಮಣಿಪಾಲ ಬಸ್ ನಿಲ್ದಾಣದ ಬಳಿ ಯಾವುದೇ ಜಾಗ ದೊರೆಯದ ಕಾರಣ ಈ ರಸ್ತೆಯಲ್ಲಿ ನಿರ್ಮಿಸಲಾಗಿದೆ. ನಿನ್ನೆ ಉದ್ಘಾಟನೆಗೊಂಡ ಮಣಿಪಾಲದ ಇಂದಿರಾ ಕ್ಯಾಂಟಿನ್‌ಗೆ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.
ಮಣಿಪಾಲ ಮಾಧವ ಕೃಪಾ ಶಾಲೆಯ ಬಳಿ ಬೀದಿ ನಾಯಿಗಳಿಗೆ ಕೆಲವು ವ್ಯಕ್ತಿಗಳು ಊಟ ತಂದು ಕೊಡುತ್ತಿರುವುದರಿಂದ ಆ ನಾಯಿಗಳು ಈಗ ಶಾಲಾ ಮಕ್ಕಳ ಕೈಯಲ್ಲಿರುವ ಊಟವನ್ನು ಕಿತ್ತುಕೊಳ್ಳಲು ದಾಳಿ ನಡೆಸುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಸಂತಿ ಶೆಟ್ಟಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ನಗರದಲ್ಲಿ ಬೀದಿನಾಯಿಗಳನ್ನು ಸಾಕಲು ಎನ್‌ಜಿಓ ಸಂಘಟನೆಯೊಂದು ಮುಂದೆ ಬಂದಿದ್ದು, ಅವರಿಗೆ ಜಾಗ ಗುರುತಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಅಂಬೇಡ್ಕರ್-ಕವಿ ಮುದ್ದಣ
ಅಜ್ಜರಕಾಡು ಭುಜಂಗಪಾರ್ಕ್‌ನಲ್ಲಿ ನಿರ್ಮಿಸಿರುವ ಬಯಲು ರಂಗ ಮಂದಿರಕ್ಕೆ ಕವಿ ಮುದ್ದಣನ ಹೆಸರನ್ನು ಇಡುವಂತೆ ವಸಂತಿ ಶೆಟ್ಟಿ ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಯುವರಾಜ್, ಈ ರಂಗಮಂದಿರಕ್ಕೆ ಅಂಬೇಡ್ಕರ್ ಹೆಸರು ಇಡುವ ಬಗ್ಗೆ ಈ ಹಿಂದೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಹೀಗಾಗಿ ರಂಗಮಂದಿರಕ್ಕೆ ಅಂಬೇಡ್ಕರ್ ಹೆಸರನ್ನೇ ಇಡಬೇಕು ಎಂದು ಆಗ್ರಹಿಸಿದರು. ಈ ವಿಚಾರದಲ್ಲಿ ಸದಸ್ಯರುಗಳ ಮಧ್ಯೆ ಚರ್ಚೆ ನಡೆಯಿತು.







