ಸುಸ್ಥಿರ ಅಭಿವೃದ್ಧಿಗೆ ಅನ್ವೇಷಣೆ ಅಗತ್ಯ: ಡಾ. ವೈ.ಎನ್.ಸೀತಾರಾಂ
ಬೆಂಗಳೂರು, ಫೆ.28: ದೇಶ ಸುಸ್ಥಿರ ಅಭಿವೃದ್ದಿ ಹೊಂದಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನದ ನವೀನ ಅನ್ವೇಷಣೆಗಳನ್ನು ಅಳವಡಿಸಿಕೊಳ್ಳಲೇಬೇಕು ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವೈ.ಎನ್.ಸೀತಾರಾಂ ಅಭಿಪ್ರಾಯಪಟ್ಟರು
ಬುಧವಾರ ಕರ್ನಾಟಕ ರಾಜ್ಯವಿಜ್ಞಾನ ಪರಿಷತ್‌ನ ವತಿಯಿಂದ ಪ್ರೊ.ಎಂ.ಎ. ಸೇತುರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಆಹಾರ, ನೀರು, ಗಾಳಿ, ಬೆಳಕು ಕೊಟ್ಟಿರುವ ಈ ಸುಂದರ ಪರಿಸರವನ್ನು ಸುಸ್ಥಿರವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.
ಪ್ರಚಲಿತ ದಿನಗಳಲ್ಲಿ ದೇಶದ ಎಲ್ಲ ಪ್ರದೇಶಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಅದರಲ್ಲಿ ಬೆಂಗಳೂರು ನೀರಿನ ಕೊರತೆಯಿಂದ ಬಳಲುತ್ತಿರುವ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದೆ. ಹೀಗಾಗಿ ಅತ್ಯಂತ ಜಾಗ್ರತೆಯಿಂದ ನೀರನ್ನು ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು.
ವಿಜ್ಞಾನ ಸಂವಹನಕಾರ ಪ್ರೊ.ಬಿ.ಕೆ.ವಿಶ್ವನಾಥರಾವ್ ಮಾತನಾಡಿ, ಹಿರಿಯ ವಿಜ್ಞಾನಿ ಸರ್ ಸಿ.ವಿ.ರಾಮನ್‌ರವರು ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಮಹತ್ತರ ಸಂಶೋಧನೆಗಳನ್ನು ಕೈಗೊಂಡು, ಏಷ್ಯಾ ಖಂಡಕ್ಕೆ ವಿಜ್ಞಾನ ಕ್ಷೇತ್ರದ ಮೊದಲ ನೊಬೆಲ್ ಪ್ರಶಸ್ತಿ ದೊರಕಿಸಿಕೊಟ್ಟರು. ಅವರ ಸಂಶೋಧನಾ ಪ್ರವೃತ್ತಿ, ಸಮಯ ಪ್ರಜ್ಞೆ ಮತ್ತು ಆತ್ಮವಿಶ್ವಾಸ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಕರ್ನಾಟಕ ವಿಜ್ಞಾನ ಪರಿಷತ್‌ನ ಖಜಾಂಚಿ ನರೇಂದ್ರ ಆಡನೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಕವಿರಾಪ ಯೋಜನಾಧಿಕಾರಿ ಜಯಕುಮಾರ ಸ್ವಾಗತಿಸಿದರು. ಪ್ರಭುಲಿಂಗಯ್ಯ ಮಠ ನಿರೂಪಿಸಿದರು. ಕೊನೆಯಲ್ಲಿ ರಾಜಶೇಖರ ಪಾಟೀಲ ವಂದಿಸಿದರು.







