ನೀಟ್ ಪರೀಕ್ಷೆ: ಅರ್ಹತಾ ನಿಯಮಗಳ ಕುರಿತ ಸಿಬಿಎಸ್‌ಇ ಅಧಿಸೂಚನೆಗೆ ಹೈಕೋರ್ಟ್ ತಡೆ

ಹೊಸದಿಲ್ಲಿ,ಫೆ.28: ಸಾಮಾನ್ಯ ವರ್ಗದವರಿಗೆ 25 ವರ್ಷ ಮತ್ತು ಮೀಸಲು ವರ್ಗದವರಿಗೆ 30 ವರ್ಷಗಳ ವಯೋಮಿತಿ ಸೇರಿದಂತೆ ನೀಟ್ ಪರೀಕ್ಷೆಗೆ ಹಾಜರಾಗಲು ಬಯಸುವ ಎಂಬಿಬಿಎಸ್ ಆಕಾಂಕ್ಷಿಗಳಿಗೆ ಅರ್ಹತಾ ನಿಯಮಗಳನ್ನು ರೂಪಿಸಿ ಸಿಬಿಎಸ್‌ಇ ಹೊರಡಿಸಿರುವ ಅಧಿಸೂಚನೆಗೆ ದಿಲ್ಲಿ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿ ಬುಧವಾರ ಆದೇಶಿಸಿದೆ.
ನೀಟ್ ಪರೀಕ್ಷೆಗೆ ಅರ್ಜಿಗಳನ್ನು ಸಲ್ಲಿಸಲು ಮಾ.9 ಕೊನೆಯ ದಿನಾಂಕವಾಗಿದ್ದು, ಪರೀಕ್ಷೆಗೆ ಹಾಜರಾಗಲು ತಾವು ಅರ್ಜಿಗಳನ್ನು ಸಲ್ಲಿಸುವುದನ್ನು ನಿರ್ಬಂಧಿಸಿರುವ ವಿವಿಧ ಅರ್ಹತಾ ನಿಯಮಗಳಿಂದ ಆಕ್ರೋಶಗೊಂಡಿರುವ ಹಲವಾರು ಮೆಡಿಕಲ್ ಆಕಾಂಕ್ಷಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ಚಂದ್ರಶೇಖರ ಅವರ ಪೀಠವು ಈ ಆದೇಶವನ್ನು ಹೊರಡಿಸಿತು.
ಸಿಬಿಎಸ್‌ಇ ಹೊರಡಿಸಿರುವ ಅಧಿಸೂಚನೆಯಂತೆ ಮುಕ್ತ ಶಾಲೆಗಳಲ್ಲಿ ಕಲಿತಿರುವ ಅಭ್ಯರ್ಥಿಗಳು, ಜೀವಶಾಸ್ತ್ರವನ್ನು ಹೆಚ್ಚುವರಿ ವಿಷಯವನ್ನಾಗಿ ತೆಗೆದುಕೊಂಡಿರುವ ವಿದ್ಯಾರ್ಥಿಗಳು, 11 ಮತ್ತು 12ನೇ ತರಗತಿಗಳನ್ನು ಪೂರೈಸಲು ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಯನ್ನು ತೆಗೆದುಕೊಂಡಿರುವವರು ಮತ್ತು ಖಾಸಗಿಯಾಗಿ ಓದಿರುವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ಯಾದರೂ ಅವರು ಪರೀಕ್ಷೆಗೆ ಹಾಜರಾಗಬಹುದು ಎಂದು ಅದರ ಅರ್ಥವಲ್ಲ ಎಂದು ಮಧ್ಯಂತರ ಆದೇಶ ಹೊರಡಿಸುವ ವೇಳೆ ನ್ಯಾಯಾಲಯವು ಸ್ಪಷ್ಟಪಡಿಸಿತು.
ಮುಕ್ತ ಶಾಲೆಗಳಲ್ಲಿ ಓದಿರುವ ಅಥವಾ ಖಾಸಗಿಯಾಗಿ ವ್ಯಾಸಂಗ ನಡೆಸಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕಿದ್ದರೆ ಅವರು ಮಾನ್ಯತೆ ಹೊಂದಿರುವ ಮಂಡಳಿಗೆ ಸೇರಿದವರಾಗಿರಬೇಕು ಎಂದೂ ನ್ಯಾಯಾಲಯವು ಹೇಳಿತು.
ಮುಂದಿನ ವಿಚಾರಣಾ ದಿನಾಂಕವಾದ ಎ.6ರವರೆಗೆ ಈ ಮಧ್ಯಂತರ ಆದೇಶವು ಮುಂದುವರಿಯುತ್ತದೆ ಎಂದೂ ಅದು ತಿಳಿಸಿತು.







