ಬ್ಯಾಂಕ್‌ಗಳಿಗೆ ಪಂಗನಾಮ: 3,972 ಕೋಟಿ ರೂ. ವಂಚನೆಯ ಮತ್ತೊಂದು ಪ್ರಕರಣ ಬೆಳಕಿಗೆ

ಲಕ್ನೋ, ಫೆ.28: ಕಾನ್ಪುರ ಮೂಲಕ ರೊಟೊಮ್ಯಾಕ್ ಸಂಸ್ಥೆ ಬ್ಯಾಂಕ್‌ಗಳಿಗೆ ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಿಗೆ ಕಾನ್ಪುರದ ಮತ್ತೊಂದು ಸಂಸ್ಥೆಯ ಹೆಸರೂ ಬ್ಯಾಂಕ್ ಸಾಲ ವಂಚನೆಯಲ್ಲಿ ಕೇಳಿಬರುತ್ತಿದೆ. ಕಾನ್ಪುರ ಮೂಲಕ ಶ್ರೀ ಲಕ್ಷ್ಮಿ ಕಾಸ್ಟಿನ್ ಲಿಮಿಟೆಡ್ ಎಂಬ ಸಂಸ್ಥೆ 16 ಬ್ಯಾಂಕ್‌ಗಳಿಗೆ 3,972 ಕೋಟಿ ರೂ. ವಂಚಿಸಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಶ್ರೀ ಲಕ್ಷ್ಮಿ ಕಾಸ್ಟಿನ್ ಲಿಮಿಟೆಡ್ ಸಂಸ್ಥೆಗೆ ದೊಡ್ಡ ಪ್ರಮಾಣದಲ್ಲಿ ಸಾಲ ನೀಡಿರುವ ಸೆಂಟ್ರಲ್ ಬ್ಯಾಂಕ್ ಈಗಾಗಲೇ ಸಂಸ್ಥೆಯ ಆಸ್ತಿಗಳನ್ನು ಹರಾಜು ಮಾಡಲು ಆರಂಭಿಸಿದೆ. ಎಂ.ಪಿ ಅಗರ್ವಾಲ್ ಈ ಸಂಸ್ಥೆಯ ಮುಖ್ಯಸ್ಥ ಮತ್ತು ವ್ಯವಸ್ಥಾಪನಾ ನಿರ್ದೇಶಕರಾಗಿದ್ದು ಇದರ ಮುಖ್ಯ ಕಚೇರಿ ಕಾನ್ಪುರದ ಕೃಷ್ಣಾಪುರಂನಲ್ಲಿದೆ. ವಸ್ತ್ರ ಉದ್ದಿಮೆಯ ಜೊತೆಗೆ ಶ್ರೀ ಲಕ್ಷ್ಮಿ ಕಾಸ್ಟಿನ್ ಲಿಮಿಟೆಡ್ ಸಂಸ್ಥೆಯು ವಾಹನಗಳಿಗೆ ಸ್ಫೋಟಕನಿರೋಧಗಳನ್ನೂ ನಿರ್ಮಿಸುತ್ತದೆ ಎಂದು ವರದಿ ತಿಳಿಸಿದೆ. ಶ್ರೀ ಲಕ್ಷ್ಮಿ ಕಾಸ್ಟಿನ್ ಲಿಮಿಟೆಡ್ ಹೆಸರಿನಲ್ಲಿ 1,495 ಕೋಟಿ ರೂ. ಆಸ್ತಿಯಿದೆ. ವಿವಿಧ ಬ್ಯಾಂಕ್‌ಗಳಲ್ಲಿ ಸಂಸ್ಥೆಯ ಹೆಸರಲ್ಲಿ ಕೇವಲ 2.54 ಕೋಟಿ ರೂ. ಜಮೆ ಮಾಡಲಾಗಿದೆ. ಸಂಸ್ಥೆಯ ವಾರ್ಷಿಕ ವೆಚ್ಚವು 577 ಕೋಟಿ ರೂ. ಆಗಿದೆ. ಆದರೆ ಆದಾಯವು ಕೇವಲ 311 ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ.
ಸೆಂಟ್ರಲ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, ಎಕ್ಸಿಮ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಐಡಿಬಿಐ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಸಾರಸ್ವತ್ ಬ್ಯಾಂಕ್, ಆಂಧ್ರ ಬ್ಯಾಂಕ್ ಹಾಗೂ ಎಡೆಲ್‌ವಿಸ್ ಎಸ್ಟೇಟ್ ರಿಕನ್‌ಸ್ಟ್ರಕ್ಷನ್ ಇವುಗಳು ಶ್ರೀ ಲಕ್ಷ್ಮಿ ಕಾಸ್ಟಿನ್ ಲಿಮಿಟೆಡ್‌ಗೆ ಸಾಲ ನೀಡಿದ ಬ್ಯಾಂಕ್‌ಗಳಾಗಿವೆ.







