ಸಿಸಿಬಿ ಪೊಲೀಸರು ನೀಡಿದ್ದ ನೋಟಿಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಸಿವಿಲ್ ವ್ಯಾಜ್ಯವೊಂದರ ಪ್ರಕರಣ

ಬೆಂಗಳೂರು, ಫೆ.28: ಸಿವಿಲ್ ವ್ಯಾಜ್ಯವೊಂದರ ದೂರಿನ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತರು ನೀಡಿದ್ದ ನೋಟಿಸ್ ರದ್ದುಪಡಿಸುವಂತೆ ಕೋರಿ, ಬಿಟಿಎಂ ಲೇಔಟ್ ಕಾರ್ಪೊರೇಟರ್ ಕೆ.ದೇವದಾಸ್ ಮತ್ತವರ ಪತ್ನಿ ವಸಂತ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನಗರದ ಬಿಳೇಕಹಳ್ಳಿಯ ಸರ್ವೇ ನಂ. 57/1ರಲ್ಲಿರುವ 19 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಎಂ.ಶಾಂತರಾಜು ಹಾಗೂ ವಸಂತ ಅವರ ನಡುವೆ ವ್ಯಾಜ್ಯ ಏರ್ಪಟ್ಟಿದ್ದು, ಪ್ರಕರಣ ಅಧೀನ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಮಧ್ಯೆ ಶಾಂತರಾಜು ನೀಡಿದ್ದ ದೂರಿನ ಆಧಾರದ ಮೇಲೆ ವಸಂತ ಮತ್ತವರ ಪತಿ ಕೆ.ದೇವದಾಸ್ ಗೆ ಸಿಸಿಬಿಯ ವಂಚನೆ ಮತ್ತು ದುರುಪಯೋಗ ದಳದ ಸಹಾಯಕ ಪೊಲೀಸ್ ಆಯುಕ್ತ ಎಂ.ಎಚ್.ಮಂಜುನಾಥ್ ಚೌಧರಿ, ಫೆ.15ರಂದು ನೋಟಿಸ್ ಜಾರಿಗೊಳಿಸಿ ಜಮೀನಿನ ದಾಖಲೆಗಳೊಂದಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಇದರಿಂದ ಹೈಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು, ತಮ್ಮ ವಿರುದ್ಧ ಯಾವುದೇ ಎಫ್ಐಆರ್ ದಾಖಲಿಸದೇ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ಸಹಾಯಕ ಆಯುಕ್ತರ ಕ್ರಮ ಕಾನೂನುಬಾಹಿರವಾಗಿದ್ದು ಅದನ್ನು ರದ್ದುಪಡಿಸುವಂತೆ ಕೋರಿದ್ದಾರೆ.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಇದೊಂದು ಸಿವಿಲ್ ವ್ಯಾಜ್ಯವಾಗಿದ್ದು, ಸಿಸಿಬಿ ಸಹಾಯಕ ಆಯಕ್ತರು ತಮ್ಮ ವ್ಯಾಪ್ತಿ ಮೀರಿ ನೋಟಿಸ್ ಜಾರಿಗೊಳಿಸಿದ್ದಾರೆ. ದಾಖಲೆಗಳನ್ನು ಹಾಜರುಪಡಿಸಲು ಕಾಲಾವಕಾಶ ನೀಡುವಂತೆ ಕೋರಲು ಅರ್ಜಿದಾರರ ಪರ ವ್ಯಕ್ತಿಯೊಬ್ಬರನ್ನು ಎಸಿಪಿ ಕಚೇರಿಗೆ ಕಳುಹಿಸಿಕೊಡಲಾಗಿತ್ತು. ಪೊಲೀಸರು ಆ ವ್ಯಕ್ತಿಯ ಬಳಿ ಅರ್ಜಿದಾರರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುತ್ತಿದ್ದಂತೆಯೇ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಬಿಬಿಎಂಪಿ ಸದಸ್ಯರೂ ಆಗಿರುವ ಅರ್ಜಿದಾರ ಕೆ.ದೇವದಾಸ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅವರ ತೇಜೋವಧೆ ಮಾಡಲು ಹಾಗೂ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ತಪ್ಪಿಸಲು ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಹೀಗಾಗಿ ಎಸಿಪಿ ನೀಡಿರುವ ನೋಟಿಸ್ ರದ್ದುಪಡಿಸುವಂತೆ ಮನವಿ ಮಾಡಿದರು.
ಇದಕ್ಕೊಪ್ಪದ ನ್ಯಾಯಪೀಠ, ಪ್ರಕರಣದ ಸಂಬಂಧ ಸಹಾಯಕ ಆಯುಕ್ತರ ಮುಂದೆ ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಿ. ಅಲ್ಲಿ ನಿಮಗೇನಾದರೂ ತೊಂದರೆಯಾದರೆ ಪೊಲೀಸ್ ದೂರು ಪ್ರಾಧಿಕಾರವಿದೆ. ಒಂದೊಮ್ಮೆ ಅಲ್ಲಿಯೂ ನ್ಯಾಯ ಸಿಗದಿದ್ದರೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ಸೂಚಿಸಿ ಅರ್ಜಿ ವಜಾಗೊಳಿಸಿತು.







