ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಕರಣ: ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು, ಫೆ.28: ರಾಜ್ಯದ ಸುಮಾರು 60ಕ್ಕೂ ಅಧಿಕ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕ್ರಮ ಪ್ರಶ್ನಿಸಿ ನೆಲಮಂಗಲ ತಾಲೂಕಿನ ಬಸವನಹಳ್ಳಿಯ ಅಧ್ಯಕ್ಷರಾಗಿದ್ದ ಮಂಜುಳಾ ಮತ್ತು ಉಪಾಧ್ಯಕ್ಷರಾಗಿದ್ದ ನರಸಿಂಹಮೂರ್ತಿ ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯಪೀಠ ಬುಧವಾರ ತೀರ್ಪು ಪ್ರಕಟಿಸಿತು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993 ಸೆಕ್ಷನ್ 49(2) ಸಂಬಂಧ ಅರ್ಜಿದಾರರು ಮಾಡಿದ ಆರೋಪಗಳು ನಿಖರವಾಗಿಲ್ಲ. ಹೀಗಾಗಿ, ಆರೋಪಗಳ ಸ್ವರೂಪದ ಬಗ್ಗೆ ಚರ್ಚಿಸಲು ಕೋರ್ಟ್ ಮುಂದಾಗುವುದಿಲ್ಲ. ಮೇಲಾಗಿ ಕಾಯ್ದೆಯ ಸೆಕ್ಷನ್ 49(1)ರಡಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಅದು ಕಾನೂನು ಬಾಹಿರವಾಗಿರದ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತೀರ್ಪಿನಲ್ಲಿ ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ಅರ್ಜಿದಾರರ ವಿರುದ್ಧ ಈಗಾಗಲೇ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯಕ್ಕೆ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿತು. ಮತ್ತೊಂದಡೆ ಚಿತ್ರದುರ್ಗದ ಹಿರೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೌರಮ್ಮ ಮತ್ತು ಸಿದ್ದೇಶ್ವರನ ದುರ್ಗ ಗ್ರಾಮ ಪಂಚಾಯತ್ ನ ಲಲಿತಮ್ಮ ಅವರ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಸಹ ಇದೇ ವೇಳೆ ನ್ಯಾಯಪೀಠ ತೆರವುಗೊಳಿಸಿದೆ. ಹಾಗೆಯೇ, ಈ ಇಬ್ಬರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಂಬಂಧ ಆಯಾ ಗ್ರಾಮ ಪಂಚಾಯತ್ ಗಳು ಹೊಸದಾಗಿ ಸಭೆ ನಡೆಸಿ ಮುಂದಿನ ಕಾನೂನು ಕ್ರಮ ಜರುಗಿಸಬಹುದು ಎಂದು ಅನುಮತಿ ನೀಡಿದೆ.
ಅರ್ಜಿದಾರರು ಸೇರಿದಂತೆ ಒಟ್ಟು 60ಕ್ಕೂ ಅಧಿಕ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿಶ್ವಾಸ ನಿರ್ಣಯ ಮಂಡಿಸಲು ಆಯಾ ಪಂಚಾಯತ್ ನ ಉಪವಿಭಾಗಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ, ಸಭೆ ಕರೆದು ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಈ ನೋಟಿಸ್ ಮತ್ತು ಅವಿಶ್ವಾಸ ನಿರ್ಣಯ ಮಂಡನೆ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ತಮ್ಮ ವಿರುದ್ಧ ಆರೋಪ ಕೇಳಿ ಬಂದ ಕೂಡಲೇ ಆ ಕುರಿತು ಸತ್ಯಾಸತ್ಯತೆ ಪರಿಶೀಲಿಸದೆ ಹಾಗೂ ತನಿಖೆ ನಡೆಸದೆ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ನೋಟಿಸ್ ಜಾರಿ ಮಾಡಿರುವುದು ಅಸಂವಿಧಾನಿಕ. ಹೀಗಾಗಿ ನೋಟಿಸ್ ರದ್ದುಪಡಿಸಬೇಕು ಮತ್ತು ಈಗಾಗಲೇ ಮಂಡಿಸಿರುವ ಅವಿಶ್ವಾಸ ನಿರ್ಣಯ ರದ್ದುಪಡಿಸಬೇಕು. ಅಲ್ಲದೆ, ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಮೇಲೆ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತಿತರ ಆರೋಪಗಳು ಕೇಳಿಬಂದಾಗ, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಂಡು ಹುದ್ದೆಯಿಂದ ಕೆಳಗಿಳಿಸುವುದಕ್ಕೆ ಅವಕಾಶ ನೀಡಿರುವುದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993 ಸೆಕ್ಷನ್ 49(2) ಅನ್ನು ಕಾನೂನು ಬಾಹಿರ ಎಂದು ಘೊಷಿಸುವಂತೆ ಅರ್ಜಿಯಲ್ಲಿ ಕೋರಿದ್ದರು.







