ಶಿವಮೊಗ್ಗ: ಕರಡಿ ದಾಳಿಗೆ ಮಗು ಮೃತ್ಯು; ಮೂವರಿಗೆ ಗಾಯ

ಶಿವಮೊಗ್ಗ, ಫೆ. 28: ಮನೆ ಮುಂಭಾಗ ಆಟವಾಡುತ್ತಿದ್ದ ಮಕ್ಕಳ ಮೇಲೆ ಕರಡಿಯೊಂದು ದಾಳಿ ನಡೆಸಿದೆ. ಇದರಲ್ಲಿ ಮಗುವೊಂದು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾರಂದೂರು ಸಮೀಪದ ಕಿಡ್ಲುಘಟ್ಟ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಕುಮಾರ್ ಎಂಬುವರ ಆರು ತಿಂಗಳ ಪುತ್ರಿ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಕುಮಾರ್, ಅವರ ಪುತ್ರಿ ಲಾವಣ್ಯ (3), ಪತ್ನಿ ಗೌರಿ (30) ರವರು ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಘಟನೆ ಹಿನ್ನೆಲೆ: ಕುಮಾರ್ ರವರು ತಮ್ಮ ಕುಟುಂಬ ಸಮೇತರಾಗಿ ಇತ್ತೀಚೆಗೆ ತೋಟದ ಕೆಲಸಕ್ಕೆಂದು ಕುಡ್ಲುಘಟ್ಟ ಗ್ರಾಮಕ್ಕೆ ಬಂದಿದ್ದರು. ಬೆಳಿಗ್ಗೆ 8.30 ರ ಸುಮಾರಿಗೆ ಮನೆಯಂಗಳದಲ್ಲಿ ಅವರಿಬ್ಬರ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ದಿಢೀರ್ ಆಗಿ ಕರಡಿ ಮಕ್ಕಳ ಮೇಲರಗಿದೆ. ಕರಡಿಯ ದಾಳಿಗೆ ಮಗುವಿನ ತಲೆಯ ಚಿಪ್ಪು ಕಿತ್ತು ಬಂದಿತ್ತು. ಮಕ್ಕಳ ಚೀರಾಟ ಗಮನಿಸಿ ಗೌರಿ ಹಾಗೂ ಕುಮಾರ್ ರವರು ರಕ್ಷಣೆಗೆ ಧಾವಿಸಿದ್ದಾರೆ. ಅವರ ಮೇಲೆಯೂ ಕರಡಿ ದಾಳಿ ಮಾಡಿತ್ತು. ನಂತರ ಕುಮಾರ್ ರವರು ಹರಸಾಹಸ ನಡೆಸಿ ಕರಡಿಯನ್ನು ಸ್ಥಳದಿಂದ ಓಡಿಸುವಲ್ಲಿ ಸಫಲರಾಗಿದ್ದಾರೆ ಎನ್ನಲಾಗಿದೆ.
ತಕ್ಷಣವೇ ಗಾಯಾಳುಗಳನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆಗಾಗಲೇ ಮಗು ಅಸುನೀಗಿತ್ತು. ತದನಂತರ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು. ದಾಳಿ ನಡೆಸಿದ ಕರಡಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಈ ಕರಡಿಯು ಸಮೀಪದ ಕೆಂಚಮ್ಮನ ಗುಡ್ಡ ಅರಣ್ಯ ಭಾಗದಿಂದ ಬಂದಿರುವ ಶಂಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ







