ಶೈಕ್ಷಣಿಕವಾಗಿ ಪ್ರಗತಿಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಸಂಸದ ಧ್ರುವನಾರಾಯಣ್

ಮೈಸೂರು,ಫೆ.28: ಶೈಕ್ಷಣಿಕವಾಗಿ ಪ್ರಗತಿಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಂಸದ ಧ್ರುವನಾರಾಯಣ್ ಹೇಳಿದರು.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮೈಸೂರು ಜಿಲ್ಲೆಯ ಯಾಂದಹಳ್ಳಿ ಕುಪ್ಯಗ್ರಾಮಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ಎರಡು ಸರ್ಕಾರಿ ಶಾಲೆಗಳ ಪುನರ್ ನಿರ್ಮಾಣ ಕಾರ್ಯ ನಡೆಸಿದ್ದು, ಅದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ನಮ್ಮ ಕ್ಷೇತ್ರದ ಈ ಗ್ರಾಮಕ್ಕೆ ಟೊಯೋಟಾ ಕಂಪನಿಯು ಒಂದು ಕೋ.ರೂ.ವೆಚ್ಚದಲ್ಲಿ ಶಾಲೆಯನ್ನು ಪುನರ್ ನವೀಕರಿಸಿದ್ದು, ಕಂಪನಿಯ ಮುಖ್ಯಸ್ಥರಿಗೆ ಅಭಿನಂದಿಸಲೇಬೇಕು. ಯಾಕೆಂದರೆ ಶಿಕ್ಷಣದಿಂದ ಮಾತ್ರ ನಮ್ಮ ಏಳ್ಗೆ ಸಾಧ್ಯ. ಸರ್ಕಾರಿ ಶಾಲೆಗಳನ್ನು ಶಕ್ತಿಯಾಗಿಸಬೇಕು. ದೇವಸ್ಥಾನಕ್ಕೆ ನೀಡುವ ಪ್ರಾತಿನಿಧ್ಯವನ್ನು ಈಗಲೂ ಶಾಲೆಗಳಿಗೆ ನೀಡುತ್ತಿಲ್ಲ. ದೇವಸ್ಥಾನಕ್ಕೂ ಪ್ರಾಮುಖ್ಯತೆ ನೀಡಬೇಕು. ಬೇಡ ಎಂದು ಹೇಳುತ್ತಿಲ್ಲ. ಆದರೆ ಅದಕ್ಕೆ ನೀಡುವ ದುಪ್ಪಟ್ಟು ಮಹತ್ವವನ್ನು ಶಾಲೆಗಳಿಗೆ ನೀಡಿ. ದೇವಸ್ಥಾನಕ್ಕಿಂತಲೂ ಶಾಲೆ ಹೆಚ್ಚು ಪವಿತ್ರ ಎಂದರು.
ನಮ್ಮ ಮೊದಲ ಪ್ರಧಾನಿ ನೆಹರೂರವರು ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳೇ ದೇವಸ್ಥಾನಗಳು ಎಂದಿದ್ದಾರೆ. ಶೈಕ್ಷಣಿಕವಾಗಿ ನಾವು ಮುಂದುವರಿಯಬೇಕು. ಆಗ ಮಾತ್ರ ನಮ್ಮದು ಮುಂದುವರಿದ, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯ. ಶೈಕ್ಷಣಿಕ ಪ್ರಗತಿಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. 2009-10ರಲ್ಲಿ ಕೇಂದ್ರ ಸರ್ಕಾರ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದ್ದರು. 6ರಿಂದ 14 ವರ್ಷದ ಮಗುವಿಗೆ ಉಚಿತವಾಗಿ ಶಿಕ್ಷಣ ನೀಡಬೇಕು ಎಂಬ ಕಾಯಿದೆ ಬಂತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಕ್ಕಳಿಗೆ ಶೂಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿಗಳನ್ನು ನೀಡಿ ಮಕ್ಕಳನ್ನು ವಿದ್ಯಾಭ್ಯಾಸದ ಕಡೆ ಸೆಳೆಯುತ್ತಿದ್ದಾರೆ. ಹಲವು ಯೋಜನೆಗಳನ್ನು ಕೂಡ ಜಾರಿಗೆ ತಂದಿದ್ದಾರೆ. ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡ ಶಿಕ್ಷಣ ಪಡೆಯದಿದ್ದರೆ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಅವರು ವರುಣಾ ವಿಧಾನಸಭಾ ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವರುಣಾ ವಿಧಾನಸಭಾ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ಧರಾಮಯ್ಯ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಹಿರಿಯ ನಿರ್ವಹಣಾ ಕಾರ್ಯನಿರ್ವಾಹಕರಾದ ಶೇಖರ್ ವಿಶ್ವನಾಥನ್, ಉಪಾಧ್ಯಕ್ಷ ಆರ್.ವಿನಯ್ ಕುಮಾರ್,ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಕೆ.ಸಿ.ಬಲರಾಮ್, ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ, ಪಶುಭಾಗ್ಯ ಸಮಿತಿ ಸದಸ್ಯೆ ಭಾಗ್ಯಮ್ಮ, ಬಿಇಒ ಗಂಗಾಧರ್, ಡೈರಿ ಅಧ್ಯಕ್ಷ ಶಿವರಾಮು, ನಾಗರಾಜು, ಮರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.







