ಇವಿಎಂಗಳ ಪರಿಶೀಲನೆ ಬೆಲ್ಸ್ ಸಂಸ್ಥೆಗೆ ನೀಡಲಾಗಿದೆ: ಡಿ.ರಂದೀಪ್
ಮೈಸೂರು,ಫೆ.28: ಇವಿಎಂಗಳ ಪರಿಶೀಲನೆ ನಡೆಸಲು ಬೆಲ್ಸ್ ಸಂಸ್ಥೆಗೆ ನೀಡಲಾಗಿದ್ದು, ಅವರು ದೃಢೀಕರಿಸಿದ ಮೆಶಿನ್‍ಗಳನ್ನ ಮಾತ್ರ ಮತದಾನಕ್ಕೆ ಬಳಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಚುನಾವಣೆಯ ಸಿದ್ಧತೆಯ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್, ಇವಿಎಂ, ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಮತ್ತು ವಿವಿ ಪ್ಯಾಟ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಬಂದಿದೆ. ತಮಿಳುನಾಡಿನಿಂದ ಸುಮಾರು 3500 ವಿವಿ ಪ್ಯಾಟ್‍ಗಳು, 3600 ಕಂಟ್ರೋಲ್ ಯುನಿಟ್, 3000 ಬ್ಯಾಲೆಟ್‍ಗಳು ಬಂದಿದ್ದು, ವಿವಿ ಪ್ಯಾಟ್‍ನ್ನು ಬೆಲ್ಸ್ ಸಂಸ್ಥೆಯವರು ಕೊಟ್ಟಿದ್ದಾರೆ. ನಿನ್ನೆ ಮಧ್ಯಾಹ್ನ 3 ಗಂಟೆಯಿಂದ ಮೊದಲ ಹಂತದ ಇವಿಯಂಗಳ ಪರೀಶಿಲನೆ ನಡೆಯುತ್ತಿದೆ ಇನ್ನೂ ಮೂರು ನಾಲ್ಕು ದಿನಗಳ ಒಳಗಾಗಿ ಎಲ್ಲಾ ವಿವಿ ಪ್ಯಾಟ್‍ಗಳ ಪರೀಶಿಲನೆ ನಡೆಯುತ್ತದೆ ಎಂದರು.
ರಾಜಕೀಯ ಪಕ್ಷಗಳ ಮುಖಂಡರು ಇದರ ವೀಕ್ಷಣೆಯನ್ನ ಮಾಡಲು ಅನುಮತಿಯನ್ನ ಕೊಟ್ಟಿದ್ದೇವೆ. ಸೂಕ್ತ ಭದ್ರತೆಯಲ್ಲಿ ಇವಿಯಂ ಪರಿಶೀಲನೆ ನಡೆಯುತ್ತಿದ್ದು, ಯಾರು ಕೂಡಾ ಮೊಬೈಲ್ ಫೋನ್‍ಗಳನ್ನ ಬಳಸದಂತೆ ಸೂಚನೆ ನೀಡಲಾಗಿದ್ದು, ವಿಡಿಯೋ ಗ್ರಾಫಿ ಮಾಡಿಸಲಾಗುತ್ತಿದೆ. ವೆಬ್ ಕ್ಯಾಸ್ಟಿಂಗ್ ಕೂಡ ಮಾಡಲಾಗುತ್ತಿದೆ. ಪರಿಶೀಲನೆ ವೇಳೆ ಲೋಪ ಕಂಡು ಬಂದಂತಹ ಇವಿಯಂಗಳನ್ನು ಬೆಲ್ಸ್ ಸಂಸ್ಥೆಗೆ ವಾಪಸ್ ನೀಡಲಾಗುತ್ತದೆ. ಬೆಲ್ಸ್ ಸಂಸ್ಥೆಯವರು ದೃಢೀಕರಿಸಿದ ಇವಿಎಂ ಮೆಶಿನಗಳನ್ನು ವೇರ್‍ಹೌಸ್‍ನಲ್ಲಿ ಇಡಲಾಗುತ್ತದೆ. ಅಭ್ಯರ್ಥಿಗಳು ಅಂತಿಮವಾದ ಬಳಿಕ ಅವರ ಹೆಸರನ್ನು ಇವಿಎಂ ಮೆಶಿನ್‍ಗಳಿಗೆ ಸೇರಿಸಲಾಗುವುದು ಎಂದರು.
ಇನ್ನೂ 2018 ಚುನಾವಣೆಯ ಮತದಾರರ ಅಂತಿಮ ಪಟ್ಟಿಯನ್ನು ಇಂದು ಪ್ರಕಟಿಸಬೇಕೆಂದು ಚುನಾವಣೆಯ ಮುಖ್ಯಸ್ಥರು ಸೂಚನೆ ನೀಡಿದ್ದಾರೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಈ ಮತದಾರರ ಪಟ್ಟಿಯನ್ನು ಪರಿಶೀಲನೆ ನಡೆಸಿ ಸಂಬಂಧ ಪಟ್ಟ ಇಆರ್‍ಓಗಳಿಂದ ಪ್ರಮಾಣಪತ್ರವನ್ನ ಪಡೆದು ನಂತರ ರಾಜಕೀಯ ಪಕ್ಷಗಳಿಗೆ ಕಳುಹಿಸಿ ಕೊಡಲಾಗುವುದು. ಮಾರ್ಚ್ 1 ರಿಂದ ನಿರಂತರವಾಗಿ ಮತದಾರರ ಪಟ್ಟಿಗೆ ಪರಿಷ್ಕರಣೆ ಮಾಡಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಅರ್ಜಿ 6 ನ್ನು ಕೊಟ್ಟು ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.







