ಇಬ್ಬರು ಮಹಿಳಾ ಕ್ರೀಡಾಳುಗಳ ಮೇಲೆ ಆ್ಯಸಿಡ್ ದಾಳಿ

ಮೀರತ್, ಫೆ.28: ಮಹಿಳಾ ಕುಸ್ತಿಪಟು ಹಾಗೂ ಮಹಿಳಾ ಬಾಕ್ಸರ್ ಮೇಲೆ ಮೂರು ಮಂದಿ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದ್ದು , ಘಟನೆಯ ಪ್ರಧಾನ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 27ರ ಹರೆಯದ ಸೋನಿ ಎಂಬಾಕೆ ಪ್ರಮುಖ ಆರೋಪಿಯಾಗಿದ್ದು ಈಕೆಯನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಇಬ್ಬರು ಸಹ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ.
ಕೆಲ ದಿನಗಳ ಹಿಂದೆ ಸೋನಿ ಜೈಲಿನಲ್ಲಿರುವ ತನ್ನ ತಂದೆಯನ್ನು ಭೇಟಿಯಾಗಲು ಹೋಗಿದ್ದಳು. ಅದೇ ಸಂದರ್ಭ ಶಾಲು ಎಂಬ ಮಹಿಳಾ ಕುಸ್ತಿಪಟು ಕೂಡಾ ಜೈಲಿನಲ್ಲಿರುವ ತನ್ನ ತಂದೆಯನ್ನು ಭೇಟಿ ಮಾಡಲು ಬಂದಿದ್ದಳು. ಸರತಿ ಸಾಲಿನಲ್ಲಿ ನಿಲ್ಲುವ ವಿಷಯದಲ್ಲಿ ಶಾಲು ಹಾಗೂ ಸೋನಿ ಮಧ್ಯೆ ವಾಗ್ವಾದ ನಡೆದಿದೆ. ಶಾಲುವಿಗೆ ಪಾಠ ಕಲಿಸಲು ನಿರ್ಧರಿಸಿದ್ದ ಸೋನಿ, ವಿಜಯ್ ಹಾಗೂ ಮತ್ತೊಬ್ಬನ ಸಹಾಯ ಪಡೆದು ಆ್ಯಸಿಡ್ ಎರಚುವ ಯೋಜನೆ ರೂಪಿಸಿದ್ದರು. ಅದರಂತೆ, ಉ.ಪ್ರದೇಶದ ಮೀರತ್‌ನಲ್ಲಿರುವ ಕ್ರೀಡಾಂಗಣಕ್ಕೆ ಅಭ್ಯಾಸಕ್ಕೆಂದು ಶಾಲು ಹಾಗೂ ಆಕೆಯ 19 ವರ್ಷದ ಗೆಳತಿ, ಬಾಕ್ಸಿಂಗ್ ಪಟು ಆಗಿರುವ ಗರೀಮಾ ತೆರಳುತ್ತಿದ್ದಾಗ ಈ ಮೂವರು ಅಡ್ಡಗಟ್ಟಿ ಆ್ಯಸಿಡ್ ಎರಚಿದ್ದಾರೆ.
ಶಾಲುವಿನ ಬೆನ್ನಿಗೆ ಶೇ.20ರಷ್ಟು ಸುಟ್ಟ ಗಾಯವಾಗಿದ್ದರೆ ಗರೀಮಾಳ ಮೊಣಕೈಗೆ ಸುಟ್ಟ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ ಎಂದು ಕಂಟೋನ್ಮೆಂಟ್ ವೃತ್ತದ ಪೊಲೀಸ್ ಅಧಿಕಾರಿ ಸತ್ಪಾಲ್ ಅಮ್ಟೂಲ್ ತಿಳಿಸಿದ್ದಾರೆ.
ಆ್ಯಸಿಡ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ 2013ರಲ್ಲಿ ಸುಪ್ರೀಂಕೋರ್ಟ್ ನಿಷೇಧ ಹೇರಿದ್ದರೂ ಆರೋಪಿಗಳು ಆ್ಯಸಿಡ್ ಪಡೆಯಲು ಹೇಗೆ ಸಾಧ್ಯವಾಯಿತು ಎಂಬ ಕುರಿತು ತನಿಖೆ ನಡೆಸಲಾಗುವುದು. ನಾಪತ್ತೆಯಾಗಿರುವ ಆರೋಪಿ ವಿಜಯ್ ಆ್ಯಸಿಡ್ ತಂದಿದ್ದು , ಆತನ ತಂದೆಯನ್ನು ವಶಕ್ಕೆ ಪಡೆದುಕೊಂಡು ವಿಜಯ್ ಅಡಗುತಾಣದ ಬಗ್ಗೆ ವಿಚಾರಿಸಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಗಾಯಗೊಳಿಸಿರುವ ಹಾಗೂ ಕೊಲೆಗೆ ಪ್ರಯತ್ನ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







