ಬರಲಿದೆಯೇ ವಿದ್ಯುತ್ ಚಾಲಿತ ಮಾರುತಿ ಆಲ್ಟೋ ಕಾರು ?

ಹೊಸದಿಲ್ಲಿ, ಫೆ.28: ಭಾರತದ ಅತೀದೊಡ್ಡ ಕಾರ್ ತಯಾರಿಕಾ ಸಂಸ್ಥೆ ಮಾರುತಿ ಸುಝುಕಿಯ ಅತ್ಯಂತ ಜನಪ್ರಿಯವಾಗಿರುವ ಆಲ್ಟೊ ಮಾದರಿಯ 35 ಲಕ್ಷ ಕಾರುಗಳು ಫೆಬ್ರವರಿ ತಿಂಗಳಲ್ಲಿ ಮಾರಾಟವಾಗಿವೆ ಎಂದು ಸಂಸ್ಥೆ ತಿಳಿಸಿದೆ. ಆಲ್ಟೊ ಕೇವಲ ಭಾರತದಲ್ಲಷ್ಟೇ ಅತೀ ಹೆಚ್ಚು ಮಾರಾಟವಾಗುವ ಕಾರಲ್ಲ ಬದಲಿಗೆ ಜಾಗತಿಕವಾಗಿಯೂ ಜನಮನ್ನಣೆ ಪಡೆದಿರುವ ಕಾರ್ ಆಗಿದೆ ಎಂದು ಮಾರುತಿ ಸುಝುಕಿಯ ಹಿರಿಯ ಕಾರ್ಯಕಾರಿ ನಿರ್ದೇಶಕರಾದ ಆರ್.ಎಸ್ ಕಲ್ಸಿ ತಿಳಿಸಿದ್ದಾರೆ. ಸದ್ಯ ಮಾರುಕಟ್ಟಯಕಲ್ಲಿ ಆಲ್ಟೊ ಕಾರ್ ಎರಡು ರೀತಿಯ ಇಂಜಿನ್ನೊಂದಿಗೆ ಲಭ್ಯವಿದೆ. ಒಂದು 800 ಸಿಸಿ ಮತ್ತು ಕೆ10 ಹಾಗೂ ಸಿಎನ್‌ಜಿ ಇಂಧನ ಮಾದರಿ. ಆಲ್ಟೊ ಕೆ10ನಲ್ಲಿ ಕ್ಲಚ್ ರಹಿತ ಸ್ವಯಂಚಾಲಿತ ಗೇರ್ ಬದಲಾವಣೆ ಸೌಲಭ್ಯವಿದೆ. ವಿದ್ಯುತ್ ಚಾಲಿತ ಆಲ್ಟೊ ಕಾರ್‌ಗಳು ಮಾರುಕಟ್ಟೆಗೆ ಬರಲಿವೆ ಎಂಬ ಮಾತಿಗೆ ಪ್ರತಿಕ್ರಿಸಿರುವ ಕಲ್ಸಿ, ಸದ್ಯಕ್ಕೆ ಸಂಸ್ಥೆಯು ಅಂಥ ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ. ಸದ್ಯ ಭಾರತದಲ್ಲಿ ವಿದ್ಯುತ್ ಚಾಲಿತ ಕಾರ್‌ಗಳನ್ನು ತಯಾರಿಸುವುದು ಬಹಳ ವೆಚ್ಚದಾಯಕವಾಗಿದೆ. ಹಾಗಾಗಿ ಸಂಸ್ಥೆಯು ಆಲ್ಟೊ ಕಾರ್‌ಗೆ ನಿಗದಿಪಡಿಸಿರುವ ದರದಲ್ಲಿ ಈ ಕಾರ್‌ಗಳನ್ನು ತಯಾರಿಸುವುದು ಕಷ್ಟ ಸಾಧ್ಯ ಎಂದು ತಿಳಿಸಿದ್ದಾರೆ.





