ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ

ಚಿಕ್ಕಮಗಳೂರು, ಫೆ.28: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಬುಧವಾರ ಪ್ರೊಭೇಷನರಿ ಉಪವಿಭಾಗಾಧಿಕಾರಿ ಸಹನಾ ಎಸ್.ಹಾದಿಮನಿ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿನ ಅಂತಿಮ ಮತದಾರರ ಪಟ್ಟಿಯಲ್ಲಿ ಪುರುಷ ಮತದಾರರ ಸಂಖ್ಯೆ 1,04,357, ಮಹಿಳೆಯರ ಸಂಖ್ಯೆ 1,03,937 ಹಾಗೂ ಇತರ 23 ಸೇರಿದಂತೆ ಒಟ್ಟು 2,08,317 ಮತದಾರರಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 238 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದ ಅವರು, ಮತದಾರರ ಹೆಸರು ತಿದ್ದಪಡಿ, ಮತದಾರರ ವರ್ಗಾವಣೆ ಸೇರಿದಂತೆ ಮತದಾರರನ್ನು ಮತಪಟ್ಟಿಗೆ ಸೇರಿಸುವ ಕಾರ್ಯ ನಿರಂತರವಾಗಿದ್ದು, ಮತದಾರರು ತಮ್ಮ ಹೆಸರನ್ನು ಮತಪಟ್ಟಿಗೆ ಸೇರಿಸಲು ನಾಮಿನೇಷನ್‍ನ ಅಂತಿಮ ದಿನದವರೆಗೆ ನಿರಂತರವಾಗಿರುತ್ತದೆ. ಪಟ್ಟಿಗೆ ಯಾವುದೇ ಅರ್ಹ ಮತದಾರರ ಹೆಸರು ಸೇರ್ಪಡೆಗೊಳಿಸಲು ನಮೂನೆ 6ನ್ನು ಬ¼ಸಿ, ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸುವ ಮೂಲಕ ಮತಪಟ್ಟಿಗೆ ಹೆಸರು ಸೇರ್ಪಡೆಗೊಳಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ತಹಶೀಲ್ದಾರ್ ಪಿ.ಶಿವಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಜೆ.ಮಂಜೇಗೌಡ, ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.





